ಮೈಸೂರು, ಶಿವಮೊಗ್ಗದ ಏರ್ ಕ್ವಾಲಿಟಿ ಬೆಂಗಳೂರಿಗಿಂತ ಕಡೆ!
ಇಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತೆ ಕಾಣುತ್ತಿದೆ. ಆದರೆ ಇಷ್ಟು ದಿನ ಸಾಧಾರಣವಾಗಿದ್ದ ಮೈಸೂರು ಮತ್ತು ಶಿವಮೊಗ್ಗದಲ್ಲಿ ಇಂದು ಏಕಾಏಕಿ ವಾಯು ಗುಣಮಟ್ಟ ಕುಸಿತ ಕಂಡುಬಂದಿದ್ದು, ಬೆಂಗಳೂರಿಗಿಂತಲೂ ಹೆಚ್ಚು ಹದಗೆಟ್ಟಿದೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 154 ದಾಖಲಾಗಿದ್ದರೆ, ಮೈಸೂರು ಹಾಗೂ ಶಿವಮೊಗ್ಗದಲ್ಲಿ 172ರಷ್ಟು ಏರ್ ಕ್ವಾಲಿಟಿ ದಾಖಲಾಗಿದೆ. ಕೆಲ ದಿನಗಳ ಹಿಂದೆ ಈ ನಗರಗಳಲ್ಲಿ ನೂರಕ್ಕಿಂತ ಕಡಿಮೆಯಲ್ಲಿದ್ದ ಗುಣಮಟ್ಟ ಹಠಾತ್ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ನಗರ ಪ್ರದೇಶಗಳಲ್ಲಿ ವಾಹನಗಳಿಂದ ಹೊರಬರುವ ಹೊಗೆ, ಧೂಳು ಹಾಗೂ ನಿರಂತರ ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದರ ಪರಿಣಾಮವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಕಣ್ಣು ಕೊರಕು, ಉಸಿರಾಟದ ತೊಂದರೆ ಹಾಗೂ ಅಲರ್ಜಿಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 62 ಮತ್ತು PM10 ಪ್ರಮಾಣ 85 ಆಗಿದೆ. PM10 ಎಂದರೆ ಮಾನವನ ಕೂದಲಿಗಿಂತ ಸುಮಾರು ಏಳು ಪಟ್ಟು ತೆಳುವಾದ ಧೂಳಿನ ಕಣಗಳು. PM2.5 ಎನ್ನುವುದು ಮಾನವನ ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳಾಗಿದ್ದು, ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತ ಪ್ರವಾಹವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.
ಆದಾಗ್ಯೂ, ಇಂದಿನ ದಿನ ಬೆಂಗಳೂರಿನಲ್ಲಿ ಈ ಸೂಕ್ಷ್ಮ ಕಣಗಳ ಪ್ರಮಾಣ ಹಿಂದಿನ ದಿನಗಳಿಗಿಂತ ಕಡಿಮೆಯಿದ್ದು, ವಾಯು ಗುಣಮಟ್ಟ ಉಸಿರಾಟಕ್ಕೆ ಸಂಪೂರ್ಣ ಯೋಗ್ಯವಲ್ಲದಿದ್ದರೂ ಮುಂಚಿನಂತೆ ಹೆಚ್ಚು ಹಾನಿಕಾರಕವಾಗಿಲ್ಲವೆಂದು ತಿಳಿದುಬಂದಿದೆ.






