ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್ʼಗೆ ಹೈಕೋರ್ಟ್ ಸೂಚನೆ
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿ. ಹೀರಾಬೆನ್ ಕುರಿತ ಎಐ ವಿಡಿಯೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಪಾಟ್ನಾ ಹೈಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ. ಹೈಕೋರ್ಟ್ ಕೂಡಲೇ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕುವಂತೆ ಸೂಚನೆ ನೀಡಿದೆ.
ಕಾಂಗ್ರೆಸ್ ಪಕ್ಷದ ಪುಟದಲ್ಲಿ ಹಂಚಲಾದ ವಿಡಿಯೋದಲ್ಲಿ ಮೋದಿ ಅವರ ತಾಯಿ ಕನಸಿನಲ್ಲಿ ಬಂದು ಮಾತನಾಡುವ ಕಲ್ಪಿತ ಸಂಭಾಷಣೆ ತೋರಿಸಲಾಗಿತ್ತು. ಈ ಕುರಿತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷವು ಪ್ರಧಾನಿ ಮತ್ತು ಅವರ ತಾಯಿಯನ್ನು ಅವಹೇಳನ ಮಾಡಿದೆ ಎಂದು ಆರೋಪಿಸಿದೆ.
ಬಿಜೆಪಿ, ಈ ವಿಡಿಯೋ “ನಾಚಿಕೆಗೇಡಿನ ಸಂಗತಿ” ಎಂದು ಹೇಳಿ, ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಇತ್ತೀಚೆಗೆ ಬಿಹಾರದ ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಾಚ್ಯ ಶಬ್ದ ಬಳಕೆ ನಡೆದಿದ್ದು, ಅದರ ವಿರುದ್ಧವೂ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.