ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ: ಎ.ಎಸ್.ಪಾಟೀಲ್ ನಡಹಳ್ಳಿ
ಬೆಂಗಳೂರು: ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಕಿಡಿಕಾರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಯತ್ನಾಳ್‌ಗೆ ಯಡಿಯೂರಪ್ಪ ಅವರು ರಾಜಕೀಯ ಪುನರ್ ಜನ್ಮ ಕೊಟ್ಟಿದ್ದಾರೆ. ಯತ್ನಾಳ್ ಯಾರ ವಿರುದ್ಧ ಮಾತನಾಡಿಲ್ಲ ಹೇಳಿ.
ವಾಜಪೇಯಿ, ಮೋದಿ, ಜೋಶಿ, ಜಗದೀಶ್ ಶೆಟ್ಟರ್ ಎಲ್ಲರ ಬಗ್ಗೆ ಮಾತಾಡಿದ್ದರು. ಯಡಿಯೂರಪ್ಪಗೆ ಈ ಯತ್ನಾಳ್ ಜೀವನ ಪರ್ಯಂತ ಋಣಿಯಾಗಿರಬೇಕು. 2018ರಲ್ಲಿ ಕರೆದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಪುಣ್ಯಾತ್ಮ ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ. ಶಿಶುಪಾಲನಿಗೆ ಆದ ರೀತಿಯೇ ಯತ್ನಾಳ್‌ಗೆ ರಾಜಕೀಯ ವಧೆ ಮಾಡುವ ಕೆಲಸ ಜನರು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆದಷ್ಟು ಬೇಗ ವಿಜಯಪುರದಲ್ಲಿ ಸಮಾವೇಶ ಮಾಡಬೇಕು ಎಂದು ನಾವು ವಿಜಯೇಂದ್ರ ಅವರಲ್ಲಿ ಮನವಿ ಮಾಡುತ್ತೇವೆ. ಪಕ್ಷ ಕಟ್ಟುತ್ತೇವೆ, ಸ್ಥಳೀಯ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಯತ್ನಾಳ್ ಅವರ ಬೆದರಿಕೆ ತಂತ್ರ ನಡೆಯೋದಿಲ್ಲ ಎಂದು ಹೇಳಿದರು.