ಯಾರು ಧರ್ಮಸ್ಥಳದ ಹೆಸರು ಹಾಳು ಮಾಡಬಾರದು, ಬಿಜೆಪಿ ಇದರಲ್ಲಿ ರಾಜಕೀಯ ಬಿಡಲಿ: ಬೇಳೂರು ಗೋಪಾಲಕೃಷ್ಣ
ಬೆಂಗಳೂರು:- ಧರ್ಮಸ್ಥಳದ ಹೆಸರು ಹಾಳು ಮಾಡೋಕೆ ನೋಡಿದವರು ಯಾರು ಅಂತ ಗೊತ್ತಾಗ್ಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವ್ರು, ಧರ್ಮಸ್ಥಳವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತೇವೆ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ನೋಡಿದವರು ಯಾರು ಎಂಬುದು ಗೊತ್ತಾಗಬೇಕು. ಯಾರೋ ಒಬ್ಬ ಅನಾಮಿಕ ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದೇನೆ ಎಂದು ಹೈಕೋರ್ಟ್‌ಗೆ ಹೋಗಿದ್ದ. ಕೋರ್ಟ್ ಸೂಚನೆ ಕಾರಣಕ್ಕೆ ಎಸ್‌ಐಟಿ ರಚನೆ ಆಗಿದೆ. ಅದು ಸರ್ಕಾರ ಮಾಡಿದ್ದಲ್ಲ. ಈ ವಿಚಾರದಲ್ಲಿ ಬಿಜೆಪಿಯವರು ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡಬಾರದು. ಮಂಗಳವಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡಿದ್ದೇನೆ. ಅದಕ್ಕೆ ಸಿಎಂ ಸಹ ಸ್ಪಷ್ಟನೆ ನೀಡಿದ್ದಾರೆ. ಯಾರು ಸಹ ಧರ್ಮಸ್ಥಳದ ಹೆಸರು ಹಾಳು ಮಾಡಬಾರದು ಎಂದರು.
ಎಸ್‌ಐಟಿ ಇಂದ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. 13 ಪಾಯಿಂಟ್ ಕೂಡ ನೋಡಿದ್ದಾರೆ. ಆದರೆ ಅನಾಮಿಕನ ಉದ್ದೇಶ ಏನು? ಅವನು ಯಾಕೆ ಕೋರ್ಟ್‌ಗೆ ಹೋದ? ಹಿಂದೆ ಯಾರಿದ್ದಾರೆ ಎಲ್ಲವೂ ತನಿಖೆ ಆಗಬೇಕು. ಅಲ್ಲಿ ಏನೂ ಸಿಗಲಿಲ್ಲ ಅಂದರೆ ಅವನ ವಿರುದ್ಧವೂ ತನಿಖೆ ಆಗಬೇಕು. ಅವನ ಉದ್ದೇಶ ಏನು ಎಂಬುದು ಬಹಿರಂಗವಾಗಬೇಕು. ಯಾರು ಧರ್ಮಸ್ಥಳ ಹಾಳು ಮಾಡೋಕೆ ನೋಡಿದರು? ಯಾರು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರೋಕೆ ನೋಡಿದರು ಎಲ್ಲವೂ ಬಹಿರಂಗವಾಗಬೇಕು. ಬಿಜೆಪಿಯವರು ಈ ವಿಚಾರದಲ್ಲೂ ರಾಜಕೀಯ ಮಾಡಬಾರದು ಎಂದು ಹೇಳಿದರು.