ಲೇಟಾಗಿ ತಂದ ಊಟವನ್ನು ಫ್ರೀಯಾಗಿ ಕೊಡು ಇಲ್ಲದಿದ್ದರೆ ವಾಪಸ್ ತೆಗೆದುಕೊಂಡು ಹೋಗು’ ಎಂದ ಮಹಿಳೆಯ ಮುಖಕ್ಕೆ ಹಲ್ಲೆ ಮಾಡಿ ಮೂಗಿನ ಮೂಳೆ ಮುರಿದಿದ್ದ ಝೊಮ್ಯಾಟೋ ಡೆಲಿವರಿ ಬಾಯ್‌ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಕಾಮರಾಜ್ (28) ಬಂಧಿತ ಆರೋಪಿ. ಕಳೆದ 2 ವರ್ಷಗಳಿಂದ ಎಚ್‌ಎಸ್‌ಆರ್ ಲೇಔಟ್ ಝೊಮ್ಯಾಟೋದಲ್ಲಿ ಕಾಮರಾಜ್ ಕೆಲಸ ಮಾಡುತ್ತಿದ್ದ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದರು.
ಹಲ್ಲೆಗೊಳಗಾದ ಮಹಿಳೆ ಹಿತೇಶಾ ಜಾಲತಾಣಗಳಲ್ಲಿ ಸೌಂದರ್ಯವರ್ಧಕ ವಸ್ತುಗಳ ಪ್ರಚಾರಕರಾಗಿದ್ದು, 39,500 ಫಾಲೋವರ್ಸ್‌ಳನ್ನು ಹೊಂದಿದ್ದಾರೆ. ಹಲ್ಲೆ ನಂತರ ಮೂಗಿನ ಮೇಲೆ ರಕ್ತ ಬರುತ್ತಿರುವುದನ್ನೇ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಝೊಮ್ಯಾಟೋ ಡೆಲಿವರಿ ಬಾಯ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನೌಕರರಿಗೆ ವರ್ತನೆ ಕುರಿತು ಸೂಕ್ತ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.
ಹಲ್ಲೆ ಕುರಿತು ಸ್ಪಷ್ಟನೆ ನೀಡಿರುವ ಝೊಮ್ಯಾಟೋ, ಹಿತೇಶಾ ಅವರಿಗೆ ಆಗಿರುವ ಘಟನೆ ಕುರಿತು ಕ್ಷಮೆ ಯಾಚಿಸುತ್ತೇವೆ. ಹಿತೇಶಾ ಅವರ ಜತೆ ಸಂಪರ್ಕದಲ್ಲಿದ್ದೇವೆ. ಘಟನೆ ಬಗ್ಗೆ ತನಿಖೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಡೆಲಿವರಿ ಪಾರ್ಟನರ್ ಅನ್ನು ತೆಗೆದು ಹಾಕಿದ್ದೇವೆ ಎಂದು ತಿಳಿಸಿದೆ.
ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದೆ. ಹಸಿವಾಗಿದ್ದ ಕಾರಣ ಝೊಮ್ಯಾಟೋದಲ್ಲಿ 3.30ರಲ್ಲಿ ಫುಡ್ ಆರ್ಡರ್ ಮಾಡಿದೆ. 4.30ರೊಳಗೆ ತಲುಪಬೇಕಿತ್ತು. ಆದರೆ, ತಲುಪದೇ ಇರುವ ಕಾರಣ ಝೊಮ್ಯಾಟೋ ತಂಡದ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಬಹಳ ತಡವಾಗಿರುವ ಕಾರಣ ಉಚಿತವಾಗಿ ನೀಡಿ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿ ಎನ್ನುತ್ತಿದ್ದೆ. ಈ ಕುರಿತು ಮಾತನಾಡುವ ಸಂದರ್ಭದಲ್ಲಿ ಡೆಲಿವರಿ ಬಾಯ್ ಬಂದಿದ್ದ. ಸ್ವಲ್ಪವೇ ಬಾಗಿಲು ತೆಗೆದು, ‘ತಡವಾಗಿರುವ ಕಾರಣ ಫ್ರೀಯಾಗಿ ಕೊಡಬೇಕು ಅಥವಾ ಕ್ಯಾನ್ಸಲ್ ಮಾಡಿಕೊಳ್ಳಿ ಎಂದಿದ್ದೆ’ ಎಂದು ಹಿತೇಶಾ ಹೇಳಿದ್ದಾರೆ.

https://www.instagram.com/tv/CMOJo0XnfET/?utm_source=ig_web_button_share_sheet