ರಾಜ್ಯದಲ್ಲಿ ಮತ್ತೋರ್ವ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ
ಬೆಳಗಾವಿ: ರಾಜ್ಯದಲ್ಲಿ ಬಾಣಂತಿ ಹಾಗೂ ಗರ್ಭಿಣಿ ಮಹಿಳೆಯರ ಸಾವು ಮುಂದುವರೆದಿದೆ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಾಗಿತ್ತು. ಅದಾದ ಬಳಿಕ ಬೆಂಗಳೂರು, ಬೆಳಗಾವಿ, ರಾಯಚೂರು, ತುಮಕೂರಿನಲ್ಲೂ ಬಾಣಂತಿಯರ ಸಾವಾಗಿತ್ತು. ಇದೀಗ ಮತ್ತೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ 31 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಗಂಗವ್ವ ಗೊಡಕುಂದ್ರಿ (31) ಮೃತ ದುರ್ದೈವಿಯಾಗಿದ್ದು, ಅವರು ಜನವರಿ 28 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 30ರ ರಾತ್ರಿ ಗಂಗವ್ವ ಗೊಡಕುಂದ್ರಿ ಅವರಿಗೆ ಹೆರಿಗೆ ಆಗಿತ್ತು. ಗಂಗವ್ವ ಗೊಡಕುಂದ್ರಿ ಅವರಿಗೆ ಬಿಪಿ ಲೋ ಆಗಿ ಸೀರಿಯಸ್ ಇದೆ ಎಂದು ವೈದ್ಯರು ಜ.31ರಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಇದಾದ ಸ್ಪಲ್ಪ ಹೊತ್ತಿಗೆ ಬಾಣಂತಿ ಗಂಗವ್ವ ಗೊಡಕುಂದ್ರಿ ಮೃತಪಟ್ಟಿದ್ದಾರೆ. ಬಳಿಕ ವೈದ್ಯರು ಗಂಗವ್ವ ಗೊಡಕುಂದ್ರಿ ಕುಟುಂಬಸ್ಥರ ಕಡೆಯಿಂದ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು ಮೃತದೇಹವನ್ನು ಕೊಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.