ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿದ್ದು, ಇದರ ಪರಿಣಾಮವಾಗಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಡಿಸೆಂಬರ್ ಸೇರಿದಂತೆ ಜನವರಿಯಿಂದ ಮಾರ್ಚ್ ವರೆಗೆ ಸೀಸನಲ್ ಫ್ಲೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆ, ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಎಲ್ಲಾ ಪ್ರಯೋಗಾಲಯಗಳಲ್ಲಿ ಅಗತ್ಯ ಟೆಸ್ಟಿಂಗ್ ಕಿಟ್‌ಗಳನ್ನು ಇರಿಸಿಕೊಳ್ಳುವುದು, ಫ್ಲೂ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸರಿಯಾದ ಸಮಯದಲ್ಲಿ ಮಾನಿಟರಿಂಗ್ ಮಾಡುವಂತೆ ಸೂಚಿಸಲಾಗಿದೆ.
ಸೀಸನಲ್ ಫ್ಲೂ ಸೋಂಕಿತರ ಎಂಜಿಲಿನ ಮೂಲಕ ಹರಡುತ್ತದೆ. ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಔಷಧಿಗಳ ಮೇಲೆ ಅವಲಂಬಿತರಾದವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಸೀಸನಲ್ ಫ್ಲೂ ತಗುಲಿದಲ್ಲಿ ಕೆಲವರಿಗೆ ಆಸ್ಪತ್ರೆ ದಾಖಲೆಯ ಅಗತ್ಯ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
ಸೀಸನಲ್ ಫ್ಲೂ ಲಕ್ಷಣಗಳು
ಜ್ವರ, ಕೆಮ್ಮು, ಕೆಂಪು ಗುಳ್ಳೆಗಳು, ಹಸಿವು ಕಡಿಮೆಯಾಗುವುದು, ಮೈ–ಕೈ ನೋವು, ಶೀತ ಹಾಗೂ ಒಣ ಕೆಮ್ಮು ಸೀಸನಲ್ ಫ್ಲೂನ ಪ್ರಮುಖ ಲಕ್ಷಣಗಳಾಗಿವೆ. ಈ ಸೋಂಕು ಸಾಮಾನ್ಯವಾಗಿ ಒಂದು ವಾರದವರೆಗೆ ಇರಬಹುದು, ಕೆಲವೊಮ್ಮೆ ಮೂರು ವಾರಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆಯ ಪ್ರಮುಖ ಸೂಚನೆಗಳು
ಪ್ರತಿದಿನ ಕನಿಷ್ಠ 5 ಐಎಲ್ಐ (ILI) ಪ್ರಕರಣಗಳು ಮತ್ತು 100 ಸಾರಿ (SARI) ಪ್ರಕರಣಗಳ ಪರೀಕ್ಷೆ
ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್‌ಗಳ ಲಭ್ಯತೆ
ಪಿಪಿಇ ಕಿಟ್‌ಗಳು, ಎನ್95 ಮಾಸ್ಕ್, ಒಸೆಲ್ಟಾಮಿವಿರ್ ಮಾತ್ರೆಗಳು ಸೇರಿದಂತೆ ಅಗತ್ಯ ಔಷಧಗಳ ಶೇಖರಣೆ
ಇನ್ಫ್ಲೂಯೆನ್ಸ್ ಲಸಿಕೆ ಸಂಗ್ರಹಣೆ
ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು ಹಾಗೂ ಹೆಚ್ಚಿನ ಅಪಾಯದಲ್ಲಿರುವವರು ಲಸಿಕೆ ಪಡೆಯುವಂತೆ ಸಲಹೆ
ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ
ವೆಂಟಿಲೇಟರ್‌ಗಳ ಸಿದ್ಧತೆಗೆ ಸೂಚನೆ
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸರಿಯಾದ ಸಮಯದಲ್ಲಿ ಮಾನಿಟರಿಂಗ್‌ಗೆ ಕರೆ






