ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ ಜನಾಶೀರ್ವಾದ: ಬೊಮ್ಮಾಯಿ
ಗದಗ: ಬೂತ್ ಮಟ್ಟದಲ್ಲಿ ಸಂಘಟನೆ ಪರ್ವವನ್ನು ಆರಂಭಿಸಿ ಪಕ್ಷವನ್ನು ಬೇರು ಸಮೇತ ಗಟ್ಟಿಯಾಗಿ ಬೆಳೆಸಿ ರಾಜ್ಯ ಸಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರೆ ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಮುಂಡರಗಿ ಮಂಡಲ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಡರಗಿ ತಾಲೂಕು ಬಹಳ ವೈಶಿಷ್ಟ್ಯ ಪೂರ್ಣವಾಗಿರುವಂಥದ್ದು ಇಲ್ಲಿನ ಮಣ್ಣು ನೀರು ಗಾಳಿ ವಿಶೇಷವಾಗಿದೆ. ತೋಟಗಾರಿಕೆಗೆ ಹೇಳಿ ಮಾಡಿಸಿರುವಂಥದ್ದು. ಕೆಲವು ಭಾಗದಲ್ಲಿ ಬಹಳಷ್ಟು ಮಳೆಯ ಅಭಾವದಿಂದ ಒಣ ಬೇಸಾಯಕ್ಕೆ ಸಮಸ್ಯೆ ಇತ್ತು.
ಒಂದು ಕಾಲದಲ್ಲಿ ಅತಿ ಹೆಚ್ಚು ಪ್ಲೋರೆಸಿಸ್ ಇರುವ ತಾಲೂಕು ಅಂತ ಇತ್ತು. ಈಗ ಎಲ್ಲವೂ ಕಡಿಮೆಯಾಗಿದೆ. ಆದರೂ, ಅಭಿವೃದ್ಧಿ ಆಗಬೇಕಿದೆ. ಅದಕ್ಕಾಗಿ ನೆನೆಗುದಿಗೆ ಬಿದ್ದಿದ್ದ ಸಿಂಗಟಾಲೂರು ಏತ ನೀರಾವರಿಯನ್ನು ಎಸ್. ಎಸ್. ಪಾಟೀಲರು, ಎಂಪಿ ಪ್ರಕಾಶರು ಇದ್ದಾಗ ಆರಂಭ ಆಗಿತ್ತು. ಈ ಯೋಜನೆಯ ವ್ಯಾಪ್ತಿಯನ್ನು ನೋಡಿದಾಗ ನೀರು ಸಾಲುವುದಿಲ್ಲ ಅಂತ ಇತ್ತು ಕಾಂಗ್ರೆಸ್ ಸರ್ಕಾರ ಐದು ವರ್ಷ ಏನೂ ಮಾಡಲಿಲ್ಲ.
ನಾನು ನೀರಾವರಿ ಸಚಿವನಾಗಿ ಬಂದು 18 ಟಿಎಂಸಿ ನೀರು ನಿಗದಿ ಮಾಡುವಂತೆ ಹೇಳಿ ಅದನ್ನು ನ್ಯಾಯಮಂಡಳಿಯಲ್ಲಿ ಒಪ್ಪಿಗೆ ಪಡೆದೆವು. ಮುಂಡರಗಿ ತಾಲೂಕಿನ ಬಹುತೇಕ ಭಾಗ ನೀರಾವರಿ ಆಗಿಲ್ಲ. ಮೈಕ್ರೊ ನೀರಾವರಿ ಮಾಡಲು ಪಯತ್ನ ಮಾಡಿದ್ದೇವು. ಅದಕ್ಕೆ ರೈತರು ಸಹಕಾರ ಕೊಡಲಿಲ್ಲ. ಈಗ ಮಧ್ಯಪದೇಶದಲ್ಲಿ ಹೊಸ ಮಾದರಿ ಮೈಕ್ರೊ ನೀರಾವರಿ ಪದ್ಧತಿ ಬಂದಿದೆ. ಅದನ್ನು ಇಲ್ಲಿ ಜಾರಿಗೆ ತಂದು ಎಲ್ಲ ಹೊಲಗಳಿಗೂ ನೀರು ಹರಿಸುವ ಕೆಲಸ ಮಾಡುತ್ತೇನೆ. ಎಂದರು.






