ರಾಜ್ ಕೋಟ್ ನಲ್ಲಿ ಇಂದು ಗುಜರಾತ್ ಮಾಜಿ CM ವಿಜಯ ರೂಪಾನಿ ಅಂತ್ಯಕ್ರಿಯೆ
ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಮೂರು ದಿನಗಳ ಬಳಿಕ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಗುರುತು ಪತ್ತೆಯಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಪತ್ತೆಯಾದ ಮೃತದೇಹದೊಂದಿಗೆ ಡಿಎನ್ಎ ಮ್ಯಾಚ್ ಆಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಮಾಜಿ ಸಿಎಂ ವಿಜಯ ರೂಪಾನಿ ಅವರ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ರಾಜ್ಕೋಟ್ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 6 ಗಂಟೆಯ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿರುವ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ಯುವ ವಾಹನಕ್ಕೆ 2,000 ಕೆ.ಜಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು,
ಮೃತದೇಹದ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಗುತ್ತದೆ. ಜೂನ್ 12ರಂದು ಲಂಡನ್ಗೆ ಹಾರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಅವಘಡದಲ್ಲಿ ಸಾವನ್ನಪ್ಪಿದ 241 ಪ್ರಯಾಣಿಕರ ಪೈಕಿ ರೂಪಾನಿ ಕೂಡಾ ಒಬ್ಬರು. ಡಿಎನ್ಎ ಪರೀಕ್ಷೆ ಮೂಲಕ ಅವರ ಮೃತದೇಹವನ್ನು ಪತ್ತೆ ಮಾಡಿರುವ ಕುರಿತು ನಿನ್ನೆ ಆಸ್ಪತ್ರೆ ಅಧಿಕಾರಿಗಳು ದೃಢಪಡಿಸಿದ್ದರು.