ಕೋವಿಡ್-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮವಾಗಿ, ಆಯುಷ್ ಸಚಿವಾಲಯವು ಅನೇಕ ಆಯುರ್ವೇದ ಕ್ರಮಗಳನ್ನು ಶಿಫಾರಸು ಮಾಡಿದೆ. ಅವುಗಳಲ್ಲಿ ಅರಿಶಿನ ಕೂಡ ಒಂದು.
ನಮ್ಮಲ್ಲಿ ಅರಿಶಿನಕ್ಕೆ ಹೆಚ್ಚಿನ ಮಹತ್ವವಿದೆ. ಧಾರ್ಮಿಕ ಆಚರಣೆಯಿಂದ ಹಿಡಿದು ಔಷಧೀಯ ಉದ್ದೇಶಗಳಿಗಾಗಿ ಮತ್ತು ಅಡುಗೆಯ ಮಸಾಲೆ ಪದಾರ್ಥವಾಗಿ ಕೂಡ ಬಳಸಲಾಗುತ್ತದೆ. ಇದೀಗ
ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಚಿವಾಲಯವು ಅರಿಶಿನ ಹಾಲನ್ನು ಶಿಫಾರಸು ಮಾಡಿದೆ.
ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲು ಅದರ ಬಣ್ಣದಲ್ಲಿ ಬಂಗಾರ. ಆರೋಗ್ಯದ ದೃಷ್ಟಿಯಿಂದ ಇದರಲ್ಲಿನ ಗುಣಗಳು ಬಂಗಾರದಂತವೆ. ಹೀಗಾಗಿ ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರವಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಅರಿಶಿನ ಹಾಲಿನ ಪ್ರಯೋಜನಗಳನ್ನು ನೋಡುವುದಾದರೆ..
1. ಅರಿಶಿನದ ಪ್ರಮುಖ ಸಕ್ರಿಯ ಘಟಕಾಂಶ ‘ಕರ್ಕ್ಯುಮಿನ್’. ಇದು ಅನೇಕ ಜೀವ ವರ್ಧಿಸುವ ಗುಣಗಳನ್ನು ಹೊಂದಿದ್ದು, ಶಕ್ತಿಯುತವಾದ ರೋಗ ನಿರೋಧಕ ಗುಣವನ್ನು ಕೂಡಿದೆ.
2. ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತ ಮತ್ತು ಗಂಟಲು ನೋವನ್ನು ಹೋಗಲಾಡಿಸುತ್ತದೆ.
3. ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಅರಿಶಿನ ಹಾಲಿನ ನಿಯಮಿತ ಸೇವನೆ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು. ಅರಿಶಿನದಲ್ಲಿರುವ ‘ಕರ್ಕ್ಯುಮಿನ್ ‘ ಅಂಶ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ.
5. ಅರಿಶಿನದ ಹಾಲು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹುಣ್ಣು ಮತ್ತು ಅತಿಸಾರವನ್ನು ತಡೆಯುತ್ತದೆ.
6. ಅರಿಶಿನ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುವ ಕಾರಣ ಅಸ್ತಮಾ, ಬ್ರಾಂಕೈಟಿಸ್‌ಗೆ ಪರಿಣಾಮಕಾರಿಯಾಗಿದೆ. ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಗೂ ಅರಿಶಿನದ ಹಾಲು ಪರಿಹಾರ ನೀಡುತ್ತದೆ.
7. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಿ ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ.
8. ಅರಿಶಿನ ಹಾಲಿನ ಸೇವನೆಯಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಸಂಗ್ರಹವು ಕ್ರಮೇಣ ಕಡಿಮೆಯಾಗುತ್ತದೆ.
9. ನಿದ್ರಾಹೀನತೆ ಸಮಸ್ಯೆಗೂ ಪರಿಹಾರ.. ರಾತ್ರಿ ಊಟದ ನಂತರ ಮಲಗುವ ಮೊದಲು ಅರ್ಧ ಲೋಟ ಅರಿಶಿನ ಹಾಲನ್ನು ಕುಡಿಯುವುದರಿಂದ ನೀವು ರಾತ್ರಿ ಚೆನ್ನಾಗಿ ನಿದ್ದೆ ಮಾಡಬಹುದು.
10. ಮಧುಮೇಹ ರೋಗಿಗಳಿಗೆ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದ್ದರೆ ಅರಿಶಿನ ಹಾಲನ್ನು ಕುಡಿಯುವ ಮೂಲಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ
ಅರಿಶಿನ ಹಾಲು ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ ಅದಕ್ಕೆ ಅರಿಶಿನ, ಶುಂಠಿ ಪುಡಿ, ಕಾಳುಮೆಣಸಿನ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪ ಬೆರೆಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಕುಡಿಯಿರಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಕುಡಿಯಬಹುದು.
ಕೊರೊನಾಕ್ಕೆ ಇಲ್ಲಿಯವರೆಗೆ ಔಷಧಿಯನ್ನು ಕಂಡು ಹಿಡಿದಿಲ್ಲವಾದರೂ, ಈ ಸೋಂಕಿನಿಂದ ದೂರವಿರಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹಿಂದೆಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ. ಪ್ರಾಚೀನ ಕಾಲದಿಂದಲೂ ರೋಗನಿರೋಧಕ ವರ್ಧಕವಾಗಿ ಮತ್ತು ಆರೋಗ್ಯವನ್ನು ಸಮೃದ್ಧಗೊಳಿಸುವ ಅರಿಶಿನ ಹಾಲು ಸೇವನೆ ಈ ಸಮಯದಲ್ಲಿ ಹೆಚ್ಚು ಸೂಕ್ತವಾಗಿದೆ.