ರಾಜು.. ಆಟೋ ಓಡಿಸುತ್ತಿದ್ದರಿಂದ ಇವರನ್ನು ಆಟೋ ರಾಜು ಅಂತಾನೇ ಕರೆಯೋದು. ಇವರು ಹುಟ್ಟಿದ್ದು ಬೆಂಗಳೂರಿನ ಮಾಗಡಿ ರೋಡಿನಲ್ಲಿ. ಸಾಧಾರಣ ಕುಟುಂಬ. ಆಗೆಲ್ಲ ಮಾಗಡಿ ರೋಡ್, ಶ್ರೀರಾಂಪುರ ಎಲ್ಲವೂ ರೌಡಿಗಳ ಅಡ್ಡಾ. ಆ ರೌಡಿಗಳನ್ನೆಲ್ಲ ನೋಡಿ ತಾನು ಕೂಡ ರೌಡಿಯಾಗಬೇಕೆಂದು ಸಿಕ್ಕ ಸಿಕ್ಕವರಿಗೆ ಬಡಿಯುತ್ತಿದ್ದರಂತೆ.
ಸಣ್ಣ ಪುಟ್ಟ ಕಳ್ಳತನದಿಂದ ಶುರುವಾಯಿತಂತೆ ಇವರ ಅಡ್ಡಾ. ಓದುವಾಗಲೇ ಸ್ಕೂಲ್ ಹೆಡ್ ಮೇಡಂ ಅವರ ಬ್ಯಾಗ್ನಿಂದ ನಾಲ್ಕು ಸಾವಿರ ರೂಪಾಯಿ ಕದ್ದು ಸಿಕ್ಕಿಕೊಂಡಿದ್ದರಂತೆ. ಆಗಿನ್ನೂ 3ನೇ ತರಗತಿಯಲ್ಲಿ ಓದುತ್ತಿದ್ದು, ಆಗಲೇ ಶಾಲೆಯಿಂದ ಹೊರಹಾಕಿದರು. ಅಲ್ಲಿಗೆ ಶಾಲಾ ದಿನಗಳಿಗೆ ಕೊನೆ ಬಿತ್ತು. ಆಮೇಲೆ ರೌಡಿಗಳಿಗೆ ಸಹಾಯ ಮಾಡುವುದು, ಸಣ್ಣ ಪುಟ್ಟ ಕಳ್ಳತನ ಮಾಡುವುದು ಪರಿಪಾಠವಾಯಿತು. ಇದನ್ನು ನೋಡಿ ತಂದೆಯೂ ಮನೆಯಿಂದ ಹೊರ ಹಾಕಿದರಂತೆ.
ಇನ್ನು ಮಾಡಿದ ಕಳ್ಳತನಕ್ಕಾಗಿ ಬಾಲಾಪರಾಧಿಯಾಗಿ ಜೈಲು ಸೇರಿದ್ದರಂತೆ. ಆಗಲೇ ರಾಜನಿಗೆ ನಿಜಕ್ಕೂ ಗೊತ್ತಾಗಿದ್ದು ಕಷ್ಟ ಅಂದ್ರೆ ಏನು ಅಂತ..ಆದರೆ ಆಟೋ ರಾಜ ಬದಲಾಗಿದ್ದೂ ಇಲ್ಲಿಯೇ.. ಆಟೋ ರಾಜ ಪಾಲಿಗೆ ಈಗಲೂ ಅನ್ನಿಸುವುದು ಜೈಲು ಮನಸ್ಸು ಪರಿವರ್ತನೆ ಮಾಡಿಕೊಳ್ಳಲು ಇರುವ ಅದ್ಭುತ ತಾಣ. ಅಲ್ಲಿನ ಕಷ್ಟ, ಕೊಳಕು ವಾಸನೆ, ಊಟ, ನಿದ್ದೆ ಬಾರದ ರಾತ್ರಿಗಳು, ಸಹ ಖೈದಿಗಳ ಲೈಂಗಿಕ ಹಿಂಸೆ ಎಲ್ಲವನ್ನೂ ಕಂಡು ದೇವರೇ ಮತ್ತೆ ಇಲ್ಲಿಗೆ ಬರುವುದು ಬೇಡ. ಇನ್ನಾದರೂ ಒಳ್ಳೆಯವನಾಗಿ ಬದುಕಬೇಕೆಂದು ಹಪಹಪಿಸುತ್ತಿದ್ದರಂತೆ.
ಜೈಲಿನಿಂದ ಬಂದ ಮೇಲೆ ಸಮಾಜ ಬೇರೆಯದ್ದೇ ರೀತಿ ಕಂಡತಾಗಿ, ಎಲ್ಲಾ ದಂಧೆಗಳನ್ನು ಬಿಟ್ಟರಂತೆ. ಆದರೆ, ನೋಡಿ, ರಾಜು ತಾನು ಬದಲಾಗಿದ್ದೇನೆಂದು ಹೇಳಿದರೂ ಯಾರೂ ನಂಬುತ್ತಿರಲಿಲ್ಲವಂತೆ. ಅದು ಸಹಜ ಕೂಡ. ಅದಕ್ಕೆ ತಮ್ಮ ಜೀವನ ಶೈಲಿಯಿಂದಲೇ ಉತ್ತರ ಕೊಡಬೇಕೆಂದು ಕೊಂಡು ಆಟೋ ಓಡಿಸಲು ಮುಂದಾದ್ರು. ಮನೆಯಿಂದ ಹೊರಬಿದ್ದಿದ್ದ ಮೇಲೆ ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್, ಫ್ಲೈ ಓವರ್ ಕೆಳಗೆ ಮಲಗುತ್ತಿದ್ದರಂತೆ.
ಆ ವೇಳೆಯಲ್ಲಿ ಅವರ ಪಕ್ಕದಲ್ಲೇ ಮಲಗುತ್ತಿದ್ದರು ವೃದ್ಧರು, ಕೈಲಾಗದವರನ್ನು ಕಂಡು ಮರುಕ ಹುಟ್ಟುತ್ತಿತ್ತಂತೆ . ಆಮೇಲೆ ಆಟೋ ಓಡಿಸಲು ಶುರು ಮಾಡಿದಾಗ ಯಾರಾದರೂ ಅನಾಥವಾಗಿ ಬಿದ್ದಿದ್ದರೆ, ನೋಡಲು ಆಗುತ್ತಿರಲಿಲ್ಲವಂತೆ. ಏಕೆಂದರೆ ತಾನೂ ಅದೇ ಜಾಗದಲ್ಲಿ ಇದ್ದವನು ಅಲ್ಲವೇ. ಹಾಗಾಗಿಯೇ ಸಿಕ್ಕವರನ್ನೆಲ್ಲಾ ಮನೆಗೆ ಕರೆತಂದು ಜೋಪಾನ ಮಾಡತೊಡಗಿದೆ ಎನ್ನುತ್ತಾರೆ ರಾಜು ಅವರು. ಈಗ್ಗೆ 22 ವರ್ಷದ ಹಿಂದೆ ರಾಜು, ಆಟೋ ಓಡಿಸಿಕೊಂಡಿದ್ದ ವೇಳೆಯಲ್ಲಿ ಮದರ್ ತೆರೇಸಾ ಸಾವನ್ನಪ್ಪಿದ್ದರು. ದೇಶದ ಎಲ್ಲಾ ಕಡೆ ಅವರ ಬಗ್ಗೆಯೇ ಮಾತು. ಅವರ ಸಾವಿಗೆ ಎಲ್ಲರೂ ಕಂಬನಿ ಮಿಡಿದರು. ಇದನ್ನೆಲ್ಲಾ ನೋಡಿದ ಮೇಲೆ ಬದುಕಿದ್ದರೆ ಹೀಗೆ ಬದುಕಬೇಕು. ನಾಲ್ಕೇ ನಾಲ್ಕು ಜನಕ್ಕೆ ಬದುಕು ಉಪಕಾರವಾದರೆ ಸಾಕು ಎಂದುಕೊಂಡು ನಾಲ್ಕು ಜನ ಅಸಹಾಯಕರನ್ನು ಮನೆಗೆ ಕರೆ ತಂದು ಸಾಕಿದರಂತೆ.
ಆಟೋ ರಾಜು ಅವರ ಸೇವೆ ನೋಡಿ ಎಸ್.ಆರ್. ಮನೋಹರ್, ಡೇವಿಡ್ ದಾಸ್ ಎಂಬವವರು ಅವರೇ ಮುಂದೆ ಬಂದು ಸಹಾಯ ಮಾಡಿದರು. ಮೊದಲು ಕಾವಲ್ ಭೈರಸಂದ್ರದಲ್ಲಿ ಬಾಡಿಗೆ ಮನೆ ಮಾಡಿ, 13 ಜನರಿಗೆ ಊಟ ನೀಡಿ, ಆರೋಗ್ಯದ ಖರ್ಚು ನೋಡಿಕೊಳ್ಳುತ್ತಿದ್ದೆ. ಇದೆಲ್ಲಾ ಆಗುವಾಗಲೇ ಇಂಡಿಯಾ ಕ್ಯಾಂಪಸ್ ಕ್ರೂಸೈಟ್ ಫಾರ್ ಕ್ರೈಸ್ಟ್ ಸಂಸ್ಥೆಯವರು ದೊಡ್ಡಗುಬ್ಬಿಯಲ್ಲಿ ಅರ್ಧ ಎಕರೆ ಜಮೀನು ಕೊಟ್ಟು ಬಿಲ್ಡಿಂಗ್ ಕಟ್ಟಿಸಿಕೊಟ್ಟರು. ಇದೇ ಆಟೋ ರಾಜು ಸೇವೆಗೆ ದೊಡ್ಡ ತಿರುವು ನೀಡಿತು.
ಆಮೇಲೆ ನೋಡಿ, ಅಲ್ಲಿಗೆ ನೂರು ಜನರನ್ನು ಕರೆತಂದ್ರು. ಇಂದು 800ಕ್ಕೂ ಹೆಚ್ಚು ಜನ ಇದ್ದಾರೆ. ಇದಾದ ಮೇಲೆ ರಾಜು, ಸೇವೆಯನ್ನು ವ್ಯವಸ್ಥಿತವಾಗಿ ಮಾಡಬೇಕೆಂದು ಕೊಂಡು ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಎನ್ನುವ ಟ್ರಸ್ಟ್ ಶುರು ಮಾಡಿದರು. ಚಾಲ್ಸ್ ಪ್ರಭಾಕರ್. ಚಾರ್ಲಿ ಸಾಮ್ಯುಯಲ್, ಅಬ್ರಹಾಂ ನೈನೆಲ್, ಜಾನ್ ಪೀಟರ್ ಕೃಪಕರನ್ ಮತ್ತು ನಾನು ಸೇರಿ 21 ವರ್ಷದಲ್ಲಿ ಆಶ್ರಯ ನೀಡಿದವರ ಸಂಖ್ಯೆ 11 ಸಾವಿರಕ್ಕೂ ಅಧಿಕ.
ಏನೇ ಹೇಳಿ, ಆಟೋ ರಾಜು ಆಗ ರೌಡಿಯಾಗಿದ್ದು, ಈಗ ಸಾವಿರಾರು ಮಂದಿಗೆ ಆಶ್ರಯದಾತರಾಗಿರುವುದು ಆದರ್ಶನೀಯ. ಅವರ ಮಾನವೀಯತೆಯ ಮನೋಧರ್ಮ, ಸಾಮಾಜಿಕ ಕಳಕಳಿ ಇತರರಿಗೂ ಸ್ಫೂರ್ತಿದಾಯಕ.