ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!
ಲಕ್ಷ್ಮೀ ಲೋಕುರ, ಸಾವಯವ ರೈತ ಮಹಿಳೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದವರು. ಬೆಳವಾಡಿ-ದೊಡ್ಡವಾಡ ರಸ್ತೆಯಲ್ಲಿರುವ 22 ಎಕರೆ ಜಮೀನನ್ನು ಸಂಪೂರ್ಣ ಸಾವಯವ ಕೃಷಿಗೆ ಒಳಪಡಿಸಿದ್ದಾರೆ. 43 ವರ್ಷದ ಲಕ್ಷ್ಮೀಯವರು 4 ಎಕರೆ ಪ್ರದೇಶದಲ್ಲಿ ಹಣ್ಣು-ತರಕಾರಿ ಬೆಳೆಯುತ್ತಿದ್ದಾರೆ. ನೀರು ಇಂಗಿಸುವಿಕೆ, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಈಗ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ.
ಅದು 2002ರ ಹೊತ್ತು. ಮುಂಬೈಯಲ್ಲಿ ಈವೆಂಟ್ ಮ್ಯಾನೇಜ್ವೆುಂಟ್ನಲ್ಲಿ ತೊಡಗಿಕೊಂಡು ಪೇಂಟಿಂಗನ್ನು ಹವ್ಯಾಸವಾಗಿಸಿಕೊಂಡಿದ್ದ ಲಕ್ಷ್ಮೀ ಬದುಕಿನಲ್ಲಿ ತಮ್ಮಿಷ್ಟದ ಬಣ್ಣಗಳನ್ನು ತುಂಬಿಕೊಳ್ಳುತ್ತಿದ್ದರು. ಅದೇ ವೇಳೆಗೆ ತಂದೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಊರಿಗೆ ಧಾವಿಸಿದರು. ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ತಂದೆ ಚಿದಂಬರ ಅಂಬಣ್ಣ ಲೋಕುರ ಅವರಿಗೆ ‘ಕೃಷಿ ಜಮೀನನ್ನು ಯಾರು ನೋಡಿಕೊಳ್ಳುತ್ತಾರೆ?’ ಎಂಬ ಕೊರಗು ಕಾಡತೊಡಗಿತು. ಕಿರಿಯ ಸಹೋದರ ಆಗ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದನಾದ್ದರಿಂದ ‘ನಾನೇ ಕೃಷಿಯನ್ನು ನೋಡಿಕೊಳ್ಳುತ್ತೇನೆ’ ಎಂದು ಲಕ್ಷ್ಮಿಯವರು ವಾಗ್ದಾನ ಮಾಡಿದರು.
ಅಲ್ಲಿಗೆ ತನ್ನ ಮುಂಬೈ ನಂಟನ್ನು ಕಳಚಿಕೊಂಡರು. ಆದರೆ, ಕೃಷಿ ಬಗ್ಗೆ ಏನೂ ಗೊತ್ತಿಲ್ಲದೆ ಕೆಲಸ ಮಾಡುವುದು ಹೇಗೆ? ಅದೇ ಸಮಯದಲ್ಲಿ ಕೆಎಲ್ಇ ಸಂಸ್ಥೆಯು ಕೃಷಿಯಲ್ಲಿ ಡಿಪ್ಲೋಮಾ ಪದವಿಯನ್ನು ಆರಂಭಿಸಿತ್ತು. 2 ವರ್ಷಗಳ ಆ ಕೋರ್ಸಿಗೆ ಪ್ರವೇಶ ಪಡೆದರಾದರೂ 6 ತಿಂಗಳಷ್ಟೇ ಅಲ್ಲಿ ಕಲಿತು, ಪ್ರಾಯೋಗಿಕವಾಗಿಯೇ ಕೃಷಿ ಅರಿಯುವುದು ಬಹಳಷ್ಟಿದೆ ಎಂದರಿತು ಗದ್ದೆಗೆ ಇಳಿದರು. ಆಗ ಅಲ್ಪಕಾಲಿಕ ಬೆಳೆಗಳು, ಬಹುವಿಧ ಬೆಳೆಗಳು, ಎರೆಹುಳು ಗೊಬ್ಬರ ತಯಾರಿಕೆ, ಗೋಮೂತ್ರದ ಬಳಕೆ ಮುಂತಾದ ವಿಷಯಗಳಲ್ಲಿ ತಾವೇ ಪ್ರಯೋಗಕ್ಕೆ ಇಳಿದರು. ಈ ಕಲಿಕೆಯಲ್ಲಿ ಆರಂಭಿಕ ಹಂತದಲ್ಲಿ ಕೆಲ ತಪ್ಪುಗಳಾದರೂ ಕ್ರಮೇಣ ಯಶಸ್ಸು ಕೈಹಿಡಿಯಿತು.
ಇನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಲಕ್ಷ್ಮೀ ಲೋಕುರ ಅವರ ಕಾರ್ಯವನ್ನು ಕಂಡು ಪ್ರೋತ್ಸಾಹಿಸಿದೆ. ಕೇಂದ್ರ ಸರ್ಕಾರವು ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ಪ್ರಸಕ್ತ ಆರೇಳು ಬಗೆಯ ಹಣ್ಣು-ತರಕಾರಿಗಳನ್ನು ಬೆಳೆಯುತ್ತಿದ್ದು, ನೂರಾರು ಗ್ರಾಹಕರನ್ನು ಹೊಂದಿದ್ದಾರೆ. ಕೆಲ ರೈತರು ಬೆಳೆಯುತ್ತಿರುವ ಸಾವಯವ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಒದಗಿಸುತ್ತಿದ್ದಾರೆ. ಇನ್ನು ಸ್ವಾದಿಷ್ಟ ಹಣ್ಣುಗಳಿಗೆ ವಿದೇಶಗಳಿಂದಲೂ ಬೇಡಿಕೆ ಬಂದಿತ್ತಾದರೂ ಹೊರದೇಶಕ್ಕೆ ರಫ್ತು ಮಾಡಲು ಇವರು ಸುತಾರಾಂ ತಯಾರಿಲ್ಲ. ಇದಕ್ಕೆ ಕಾರಣ ತಂದೆಯವರು ಬಿತ್ತಿರುವ ಆದರ್ಶದಂತೆ ದುಡ್ಡಿನ ಆಸೆಗೆ ಜೋತುಬೀಳದೆ ನಮ್ಮಲ್ಲೇ ಮಾರಾಟ ಮಾಡುತ್ತಿದ್ಧಾರೆ.
ಲಕ್ಷ್ಮಿ ಅವರನ್ನು ಹೆಣ್ಣಾಗಿ ಇಷ್ಟೆಲ್ಲ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದು ಉಂಟು. ಗಂಡಿಗಿಂತ ಹೆಣ್ಣುಮಕ್ಕಳಲ್ಲಿ ತಾಳ್ಮೆ ಹೆಚ್ಚು. ಕೃಷಿಕ್ಷೇತ್ರ ಬೇಡುವುದೂ ತಾಳ್ಮೆಯನ್ನೇ. ಹಾಗಾಗಿ, ಕೃಷಿಗೆ ಹೆಣ್ಣೇ ಸೂಕ್ತ. ಅಲ್ಲದೆ, ಜೀವನಕ್ಕೆ ಅಗತ್ಯವಾದ ಶಿಕ್ಷಣವೆಲ್ಲ ಮನೆಯಲ್ಲಿಯೇ ದೊರೆತಿದ್ದರಿಂದ ಯಾವುದೂ ಕಷ್ಟವೆನಿಸಲಿಲ್ಲ ಎನ್ನುವ ಅವರು ಇದೀಗ ಬೀಜಬ್ಯಾಂಕ್ ಹುಟ್ಟುಹಾಕಿದ್ದಾರೆ. ಇವರ ಸ್ನೇಹಿತರು ಎಲ್ಲೇ ಹೋದರೂ ಇವರಿಗೆ ಜವಾರಿ ತಳಿಯ ಬೀಜಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ರೈತರು ಬರೀ ಸರ್ಕಾರದ ನೆರವಿಗಾಗಿ ಕಾಯುತ್ತ ಕೂರದೆ ಲಭ್ಯವಿರುವ ಸಂಪನ್ಮೂಲ ಹಾಗೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.
‘ಈಗಿನ ಪೀಳಿಗೆ ತುಂಬ ಪರಾವಲಂಬಿಯಾಗುತ್ತಿದ್ದು, ಇದು ತಪ್ಪಬೇಕು. ಇಲ್ಲಿನ ಪ್ರತಿಭೆಗಳು ಇಲ್ಲೇ ಕಾರ್ಯನಿರ್ವಹಿಸುವಂತಾಗಬೇಕು. ಆಗ ಕೃಷಿಯಲ್ಲೂ ಖುಷಿಯ ಬಿಂಬ ಕಾಣುವಂತಾಗುತ್ತದೆ’ ಎಂಬ ಸ್ಪಷ್ಟ ಅಭಿಪ್ರಾಯ ಹೊಂದಿರುವ ಲಕ್ಷ್ಮೀ ಲೋಕುರ ಅವರು ಯುವ ಮನಸುಗಳಲ್ಲಿ ನೆಲದ ನಂಟನ್ನು ಬೆಸೆಯುತ್ತಿದ್ದಾರೆ. ಬೆಳೆಗಳ ಜತೆಗೆ ಕನಸುಗಳ ಬೆಳೆಯನ್ನೂ ತೆಗೆಯುತ್ತಿದ್ದಾರೆ. ಅನೇಕರಿಗೆ ಸ್ಫೂರ್ತಿದಾಯಕರಾಗಿದ್ದಾರೆ.