ವಯನಾಡ್ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ
ವಯನಾಡು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ 4,04,619 ಮತಗಳ ಭಾರೀ ಅಂತರದೊಂದಿಗೆ ಗೆಲುವು ಸಾಧಿಸಿದ್ದರು. ಇದೀಗ ಲೋಕಸಭಾ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಂದ ಪ್ರಿಯಾಂಕಾ ಪ್ರಮಾಣ ವಚನ ಸ್ವೀಕರಿಸಿದರು. ಪ್ರಿಯಾಂಕಾ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದಿದ್ದರು. ಪ್ರಿಯಾಂಕಾ ಗಾಂಧಿ ಅವರು ಈಗ ಸಂಸತ್ ಪ್ರವೇಶಿಸಿದ ಗಾಂಧಿ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ. ಅವರ ತಾಯಿ ಸೋನಿಯಾ ಗಾಂಧಿ ರಾಜಸ್ಥಾನದಿಂದ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ.
ನ.23 ರಂದು ನಡೆದ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್‌ನಿಂದ ಭಾರಿ ಅಂತರದ ಗೆಲುವು ದಾಖಲಿಸಿದರು. ಅವರು 6.22 ಲಕ್ಷ ಮತಗಳನ್ನು ಪಡೆದರು. ಎರಡನೇ ಸ್ಥಾನದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನ್ ಮೊಕೇರಿಗಿಂತ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮತ್ತು ಬಿಜೆಪಿಯ ನವ್ಯಾ ಹರಿದಾಸ್‌ಗಿಂತ 5.12 ಲಕ್ಷ ಹೆಚ್ಚು ಮತಗಳ ಅಂತರದಿಂದ ಗೆದ್ದು ದಾಖಲೆ ಬರೆದಿದ್ದಾರೆ.