ಇಂಗ್ಲೆಂಡ್ನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಕಥೆ ಮುಗಿದ ಅಧ್ಯಾಯ. ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಂಡರಿ ಲೆಕ್ಕಾಚಾರದಡಿ ಅದೃಷ್ಟದ ಗೆಲುವು ಪಡೆಯುವುದರೊಂದಿಗೆ ಕ್ರಿಕೆಟ್ ಜನಕರಾದ ಇಂಗ್ಲೆಂಡಿನವರು ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗಿದ್ದೂ ಇತಿಹಾಸ..!
ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ನಿರೀಕ್ಷೆ ತಕ್ಕಂತೆ ಲೀಗ್ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತ್ತು. ಅಂಕಪಟ್ಟಿಯಲ್ಲಿ ನಂಬರ್ 1 ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡು ನಿರಾಸೆ ಅನುಭವಿಸಿತು.
ಭಾರತಕ್ಕೆ ಆರಂಭದಿಂದಲೂ ಕಾಡಿದ್ದು ಗಾಯದ ಸಮಸ್ಯೆ. ಗಾಯದ ಸಮಸ್ಯೆಯ ನಡುವೆಯೂ ಭಾರತ ಮಿಂಚಿತ್ತು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಮುಂದಿನ ಮ್ಯಾಚ್ಗಳಿಗೆ ಅಲಭ್ಯರಾಗಿದ್ದರು. ಧವನ್ ಟೂರ್ನಿಯಿಂದ ಔಟಾದ ಬಳಿಕ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 4ನೇ ಕ್ರಮಾಂಕದಲ್ಲಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಆರಂಭಿಕ ಜವಬ್ದಾರಿ ನೀಡಿ, ಹೊಸದಾಗಿ ತಂಡ ಸೇರಿಕೊಂಡ ರಿಷಭ್ ಪಂತ್ ಗೆ 4ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು.

ಧವನ್ ಸ್ಥಾನಕ್ಕೆ ಪಂತ್ ಅವರನ್ನು ಕಳುಹಿಸಿದ್ದ ಬಗ್ಗೆ ಆಯ್ಕೆ ಸಮಿತಿ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಇದೀಗ ಮಾತಾಡಿದ್ದಾರೆ.
ಆಯ್ಕೆ ವಿಚಾರಕ್ಕೆ ಬಂದಾಗ ವಿಶ್ವಕಪ್‌ನಂತ ದೊಡ್ಡ ಮಟ್ಟದ ಟೂರ್ನಿಯ ವೇಳೆ ಕೆಲವೊಂದು ನಿಯಮಗಳಿರುತ್ತವೆ. ಹೀಗಾಗಿ ಚರ್ಚೆಗೆ ದಾರಿಯಾಗಬಲ್ಲ ಪ್ರೆಸ್ ಮೀಟ್ ಕರೆಯುವ ಗೋಜಿಗೆ ನಾನು ಹೋಗಲಿಲ್ಲ. ಶಿಖರ್ ಧವನ್ ಗಾಯಗೊಂಡಾಗ ನಾವಾಗಲೇ ಆರಂಭಿಕ ಸ್ಥಾನಕ್ಕೆ ಮೀಸಲಿದ್ದ ಕೆಎಲ್ ರಾಹುಲ್ ಅವರನ್ನು ತಂದೆವು. ಯಾಕೆಂದರೆ ಟಾಪ್ ಆರ್ಡರ್‌ನಲ್ಲಿ ಎಡಗೈ ಬ್ಯಾಟ್ಸ್ಮನ್ ಪಂತ್ ಅವರನ್ನು ತರುವಂತಿರಲಿಲ್ಲ. ನಮಗೆ 4ನೇ ಕ್ರಮಾಂಕಕ್ಕೆ ಪಂತ್ ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ. ಅಲ್ಲದೆ ನಮಗೆ ಪಂತ್ ಸಾಮರ್ಥ್ಯ ನಮಗೆ ತಿಳಿದಿತ್ತು ಎಂದಿದ್ದಾರೆ. ಈ ಮೂಲಕ ಪಂತ್ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.






