ವಿಮಾನದಲ್ಲಿ ತಾಂತ್ರಿಕ ದೋಷ: ಮುಂಬೈ ಬದಲಿಗೆ ಬೆಳಗಾವಿಯಲ್ಲೇ ಲ್ಯಾಂಡಿಂಗ್
ಬೆಳಗಾವಿ: ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಶನಿವಾರ ಬೆಳಗ್ಗೆ 7.50ರ ಸುಮಾರಿಗೆ ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಈ ವಿಮಾನದಲ್ಲಿ ಒಟ್ಟು 48 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚರವಾದ ಪೈಲಟ್ ಕೇವಲ 15 ನಿಮಿಷಗಳಲ್ಲೇ ಸುರಕ್ಷಿತವಾಗಿ ವಿಮಾನವನ್ನು ಬೆಳಗಾವಿಯಲ್ಲೇ ಇಳಿಸಿದರು.
ಪೈಲಟ್ನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿ ಪ್ರಯಾಣಿಕರ ಜೀವ ಉಳಿಯಿತು. ನಂತರ ಸ್ಟಾರ್ ಏರ್ ಸಂಸ್ಥೆ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ಅವರನ್ನು ಮುಂಬೈಗೆ ಕಳುಹಿಸಿತು. ದೋಷದ ನಿಖರ ಕಾರಣ ಪತ್ತೆಹಚ್ಚಲು ವಿಮಾನಯಾನ ಸಂಸ್ಥೆ ತನಿಖೆ ನಡೆಸುತ್ತಿದೆ.