ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಕೌಟುಂಬಿಕ ಹಿಂಸೆ ಆರೋಪದ ಅಡಿ ಕೋಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.
ಮೊಹಮ್ಮದ್ ಶಮಿಗೆ ಸಂಕಷ್ಟ ಎದುರಾಗಿದ್ದು ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಶಮಿಗೆ ಪತ್ನಿ ಹಸೀನ್ ಜಹಾನ್ ಈ ಹಿಂದೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಕೌಟುಂಬಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಅಲಿಪೋರ್ ಕೋರ್ಟ್ ಶಮಿ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಇದೀಗ ವಾರೆಂಟ್ ಜಾರಿ ಮಾಡಿದ್ದು 15 ದಿನಗಳ ಒಳಗಾಗಿ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ.
ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಶಮಿ ಸರಣಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗುವ ಸಾಧ್ಯತೆ ಇದೆ.
ಹಸೀನ್ ಜಹಾನ್ ಮೊಹಮ್ಮದ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂ. ಕೋರಿ ಮನವಿ ಸಲ್ಲಿಸಿದ್ದರು. ಹಸೀನ್ ಜಹಾನ್ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಮಗಳ ಜೀವನಕ್ಕಾಗಿ 80 ಸಾವಿರ ರೂ. ನೀಡುವಂತೆ ತಿಳಿಸಿತ್ತು. ಹಸೀನ್ ಜಹಾನ್ ದೂರಿನ ಆಧಾರದ ಮೇಲೆ ಶಮಿ ಹಾಗೂ ಅವರ ಕುಟುಂಬ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.