ಶರಣಾಗಲು ಬಯಸುವ ನಕ್ಸಲರಿಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ: ಡಾ. ಜಿ ಪರಮೇಶ್ವರ್
ಬೆಂಗಳೂರು: ಶರಣಾಗಲು ಬಯಸುವ ನಕ್ಸಲರಿಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗಿಯಿತು ಅಂದುಕೊಂಡಿದ್ದೆವು. ಆದರೆ, ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆದರು. ನಂತರ ಅವರಿಬ್ಬರೂ ತಪ್ಪಿಸಿಕೊಂಡು ಹೋದರೆಂದು ಕೂಂಬಿಂಗ್ ಆಪರೇಷನ್ ನಡೆಸಲಾಯ್ತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆತನ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಪೊಲೀಸರಿಗೆ ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.
ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತನಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗಲು ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ, ಅದು ಇದ್ದಿದ್ದೇ. ಆದರೆ ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದರೆ ಈ ಥರ ಘಟನೆ ಸಹಜ ಎಂದು ಹೇಳಿದರು.