ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ: MLC ರವಿಕುಮಾರ್ ವಿರುದ್ಧ FIR
ಬೆಂಗಳೂರು: ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಮತ್ತೆ ಅಧಿಕಾರಿಯ ವಿರುದ್ಧ ನಾಲಗೆ ಹರಬಿಟ್ಟ ಆರೋಪ ಕೇಳಿಬಂದಿದೆ. ಹೌದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಜೆಪಿ ನಗರದ ನಂದಾದೀಪ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಅನ್ವಯ ಬಿಎನ್ಎಸ್ ಸೆಕ್ಷನ್ 351(3)(ಅನೈತಿಕತೆಯ ಆರೋಪ), 75(3) (ಅಶ್ಲೀಲ ಹೇಳಿಕೆ), 79(ಮಹಿಳೆಯ ಮಾನಕ್ಕೆ ಕುಂದು ತರುವ ಉದ್ದೇಶದಿಂದ ಪ್ರಯೋಗಿಸಲಾದ ಪದ) ಅಡಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಎಂಎಲ್ಸಿ ಎನ್.ರವಿ ಕುಮಾರ್ ನೀಡಿರುವ ಅವಹೇಳನಕಾರ ಹೇಳಿಕೆಯನ್ನು ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘ ಬಲವಾಗಿ ಖಂಡಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.