ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ ಮೇಟಿಯವರು ನನಗೆ ಅತ್ಯಂತ ಆಪ್ತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಹಾಲಿ ಶಾಸಕರೂ ಆಗಿದ್ದ ಹೆಚ್.ವೈ.ಮೇಟಿಯವರು ಇಂದು 12.30 ಗೆ ನಿಧನರಾಗಿದ್ದಾರೆ. ನಾನು ಮೂರುದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದು, ವೈದ್ಯರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಆದರೆ ಮೇಟಿಯವರು ಇಷ್ಟುಬೇಗ ಇಹಲೋಕ ತ್ಯಜಿಸುತ್ತಾರೆಂದು ಭಾವಿಸಿರಲಿಲ್ಲ ಎಂದರು.
ಅತ್ಯಂತ ನಿಷ್ಠಾವಂತ ರಾಜಕಾರಣಿಯಾಗಿದ್ದು, ನನಗೆ ಅತ್ಯಂತ ಆಪ್ತರಾಗಿದ್ದರು. ಮೇಟಿಯವರು ಅರಣ್ಯ ಸಚಿವರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೂಲತ: ಕೃಷಿಕರಾಗಿದ್ದ ಮೇಟಿಯವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. 1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜನಪರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದ ಮೇಟಿಯವರು ಮಂತ್ರಿಯಾಗಿರಲಿ, ಸಂಸದರಾಗಿ, ಶಾಸಕರಾಗಿರಲಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತಹ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದರು.






