ಕರ್ನಾಟಕ ಗಡಿ ಜಿಲ್ಲೆ ಕಾಸರಗೋಡಿನಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ನೇಮಿಸಿದ್ದ ಕೇರಳ ಸರ್ಕಾರ ಕನ್ನಡದ ಧ್ವನಿಗೆ ಗಢಗಢ ನಡುಗಿದೆ. ಕನ್ನಡಿಗರ ಒತ್ತಾಯಕ್ಕೆ ಮಣಿದ ಅಲ್ಲಿನ ಸರ್ಕಾರ ಕನ್ನಡದ ಮಕ್ಕಳಿಗೆ ಕನ್ನಡದಲ್ಲೇ ಪಾಠ ಹೇಳಿಕೊಡಲು ಮುಂದಾಗಿದ್ದು, ಕನ್ನಡ ಗೊತ್ತಿಲ್ಲದ ಶಿಕ್ಷಕರಿಗೆ ವೇತನ ಸಹಿತ ರಜೆ ನೀಡಿ ಕನ್ನಡ ಕಲಿತುಕೊಂಡು ಬನ್ನಿ ಎಂದು ಆದೇಶಿಸಿದೆ..! ಕನ್ನಡ ಗೊತ್ತಿಲ್ಲದ ಮಲೆಯಾಳಿ ಶಿಕ್ಷರು ಕನ್ನಡ ಕಲಿಕೆಗೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯತ್ತ ಹೆಜ್ಜೆ ಹಾಕಿದ್ದಾರೆ.
ಕೇರಳ ಸರ್ಕಾರ ಕಳೆದ ವರ್ಷದ ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಿಗೆ ಮಲೆಯಾಳಂ ಭಾಷಿಕ ಶಿಕ್ಷಕರನ್ನು ನೇಮಿಸಿತ್ತು. ಇದರಿಂದ ಆ ಸರ್ಕಾರ ಭಾರಿ ವಿರೋಧವನ್ನು ಎದುರಿಸಬೇಕಾಗಿ ಬಂದಿತ್ತು. ಈಗ ಎಚ್ಚೆತ್ತುಕೊಂಡ ಸರ್ಕಾರ ನೇಮಕವಾದ ಕನ್ನಡ ಗೊತ್ತಿರದ ಮಲೆಯಾಳಿ ಶಿಕ್ಷಕರಿಗೆ ಕನ್ನಡ ಕಲಿಯಲು ಆದೇಶ ನೀಡಿದೆ. ಕನ್ನಡ ಮಾಧ್ಯಮ ಪ್ರೌಢಶಾಲೆಯ ಇಬ್ಬರು ಮಲೆಯಾಳಂ ಶಿಕ್ಷಕರನ್ನು 1 ವರ್ಷದ ವೇತನ ಸಹಿತ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ ಕಳುಹಿಸಿಕೊಟ್ಟಿದೆ.
2018ರ ಆಗಸ್ಟ್ ನಲ್ಲಿ ಸುಮಾರು 23 ಮಂದಿ ಶಿಕ್ಷಕರಲ್ಲಿ ನಾಲ್ವರು ಮಲೆಯಾಳಿ ಶಿಕ್ಷಕರನ್ನು ಕೇರಳ ಲೋಕಸೇವಾ ಆಯೋಗದಿಂದ ಕನ್ನಡ ಮಾದ್ಯಮ ಪ್ರೌಢಶಾಲೆಗಳಿಗೆ ನೇಮಕಗೊಳಿಸಲಾಗಿತ್ತು. ಮೊದಲಿಗೆ ಕಾಸರಗೋಡು ಮಂಗಲ್ಪಾಡಿ ಶಾಲೆಗೆ ನೇಮಕಗೊಂಡ ಗಣಿತ ಶಿಕ್ಷಕರು ಕನ್ನಡ ತಿಳಿದಿರಲಿಲ್ಲ. ಹೀಗಾಗಿ ಭಾರೀ ಪ್ರತಿಭಟನೆ ನಡೆದಿತ್ತು. ನಂತರ ಶಿಕ್ಷಣ ಇಲಾಖೆ ಸುದೀರ್ಘ ರಜೆ ಮೇಲೆ ಕಳುಹಿಸಿತ್ತು. ಈ ವರ್ಷ ಮಲಪ್ಪುರಂನ ಮಲಯಾಳಿ ಶಾಲೆಗೆ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು. ಒಬ್ಬರು ಪೊಲೀಸ್ ಹುದ್ದೆ ಬಿಟ್ಟು ಶಿಕ್ಷಕ ವೃತ್ತಿ ಬಂದವರಾಗಿದ್ದರು. ಪೆರಡಾಲ ಶಾಲೆಗೆ ನೇಮಿಸಲ್ಪಟ್ಟಿದ್ದರು. ಅಲ್ಲಿಯೂ ಕನ್ನಡಿಗರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಪೊಲೀಸ್ ಇಲಾಖೆಗೆ ವಾಪಸ್ ಆಗಿದ್ದರು. ಇಬ್ಬರು ಪೈವಳಿಕೆ ಮತ್ತು ಬಂದಡ್ಕ ಶಾಲೆಗೆ ಹೋಗಿದ್ದರು. ಅಲ್ಲೂ ಕನ್ನಡ ಪರ ಧ್ವನಿ ಎದ್ದಿದ್ದರಿಂದ ಅವರನ್ನೂ ರಜೆ ಮೇಲೆ ಕಳುಹಿಸಲಾಗಿತ್ತು.
ಈಗ ಕನ್ನಡದ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಸರ್ಕಾರ ನಿರ್ಧಾರ ಕೈಗೊಂಡು, ಕನ್ನಡ ಬರದ ಶಿಕ್ಷಕರಿಗೆ ಸಂಬಳ ನೀಡಿ ಕನ್ನಡ ಕಲಿಸುತ್ತಿದೆ.
ಶಿಕ್ಷಕರಿಗೆ ಸಂಬಳ ನೀಡಿ ಕನ್ನಡ ಕಲಿಸಲು ಮುಂದಾದ ಕೇರಳ ಸರ್ಕಾರ!
Date: