ಸುರೇಖಾ ಯಾದವ್. ಭಾರತದ ಪ್ರಥಮ ಲೋಕೋ ಪೈಲಟ್. ಮೂವತ್ತು ವರ್ಷಗಳ ಹಿಂದೆ ಇಂಡಿಯನ್ ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿ ಕಾರ್ಯಾರಂಭ ಮಾಡಿದ್ರು. ಇವರ ಸಾಧನೆಯೇ ಉಳಿದೆಲ್ಲ ಮಹಿಳಾ ಲೋಕೋ ಪೈಲಟ್ಗಳಿಗೂ ಸ್ಫೂರ್ತಿ ಅಂದ್ರೆ ಖಂಡಿತ ತಪ್ಪಲ್ಲ.
ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರೆ. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಮುಂದಿದ್ರು. ಇವರು ಬದುಕಿನ ಕನಸು ಕಟ್ಟಿದ್ದು ತಾನೋರ್ವ ಟೀಚರ್ ಆಗಬೇಕು ಎಂದು. ಆದರೆ, ಹಣೆಬರಹದಲ್ಲಿ ದೇವರು ಅವರಿಗೆ ಬೇರೆಯೇ ಉದ್ಯೋಗ ಬರೆದಿದ್ದ. ಅದರಂತೆ 1987 ರಲ್ಲಿ ರೈಲ್ವೇ ಪರೀಕ್ಷೆಗಳನ್ನು ಎದುರಿಸಿದ್ರು. ಇವರು ಉತ್ತೀರ್ಣರಾಗಿ ರೈಲ್ವೇ ಇಲಾಖೆಯಲ್ಲಿ ಲೋಕೋ ಪೈಲಟ್ಆಗಿ ನೇಮಕಗೊಳ್ಳುತ್ತಾರೆ.
ನಿಮಗೂ ತಿಳಿದಿರುವಂತೆ ಹೆಣ್ಣು ಮಕ್ಕಳು ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೂ, ಅನೇಕ ಸವಾಲುಗಳ ನಡುವೆ, ಸುಮಾರು ಮೂವತ್ತು ವರ್ಷ ಇವರು ಕಳೆದದ್ದು ಅಚ್ಚರಿಯೇ ಸರಿ. ಗೂಡ್ಸ್ ರೈಲು, ಪ್ಯಾಸೆಂಜರ್ ರೈಲುಗಳಿಗೆ ಚಾಲಕಿಯಾಗಿ, ತನ್ನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.
ಇವರ ಇನ್ನೊಂದು ಹಿರಿಮೆ ಎಂದರೆ 2010 ರಲ್ಲಿ ಪುರುಷರಿಗೇ ಸವಾಲಾಗಿರುವ ಘಾಟ್ ರೈಲ್ವೆಯಲ್ಲಿ ಕಾರ್ಯ ನಿರ್ವಹಿಸಿರುವುದು. ಈ ಜವಾಬ್ದಾರಿಯನ್ನು ಸುರೇಖಾ ವಹಿಸುವ ಮುನ್ನ ಓರ್ವ ಮಹಿಳೆ ಇದನ್ನು ಸಮರ್ಥವಾಗಿ ನಿರ್ವಹಿಸುವುದು ಸಾಧ್ಯವೇ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿತ್ತು. ಆದರೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಭೇಷ್ಎನ್ನಿಸಿಕೊಂಡರು. ಅಲ್ಲದೇ 2000ರಲ್ಲಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದ ಲೇಡಿ ಸ್ಸ್ಪೆಷಲ್ ಟ್ರೈನಿನ ಮೊದಲ ಚಾಲಕಿಯಾದ ಹೆಮ್ಮೆಯೂ ಇವರಿಗಿದೆ.
ಇನ್ನು ಸುರೇಖಾ ಅವರಿಗೆ 2011ರ ಮಹಿಳಾ ದಿನದಂದು ಏಷ್ಯಾದ ಮೊದಲ ರೈಲು ಚಾಲಕಿ ಎಂಬ ಬಿರುದನ್ನೂ ನೀಡಲಾಗಿದೆ. 2011ರಲ್ಲಿ ಇವರಿಗೆ ಉನ್ನತ ಹುದ್ದೆಗೆ ಬಡ್ತಿಯೂ ಸಿಕ್ಕಿದೆ. ಅಲ್ಲದೆ, ಇವರೀಗ ರೈಲು ಚಾಲನೆಗೆ ಸಂಬಂಧಿಸಿದಂತೆ ಟ್ರೈನಿಂಗ್ ನೀಡುತ್ತಿದ್ದು, ತನ್ನ ಬಾಲ್ಯದ ಟೀಚರ್ ಕನಸನ್ನು ಈ ಮೂಲಕ ನೆರವೇರಿಸಿಕೊಂಡಿದ್ದಾರೆ. ಇವರಿಂದ ಸ್ಫೂರ್ತಿಗೊಂಡು ಸದ್ಯ ಭಾರತೀಯ ರೈಲ್ವೇಯಲ್ಲಿ ಸುಮಾರು 50ಕ್ಕೂ ಅಧಿಕ ಮಹಿಳಾ ಲೋಕೋ ಪೈಲಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುರೇಖಾ ಯಾದವ್ ಅವರು ಸಾಧನೆ ಮಾಡುವ ಹಂಬಲ ಇದ್ದರೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟು, ಸಾಧನೆಯ ಕನಸು ಹೊತ್ತವರಿಗೂ ಮಾದರಿಗಳಾಗಿದ್ದಾರೆ.