ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಎಸ್.ಎಂ ಕೃಷ್ಣ ಅಂತ್ಯಕ್ರಿಯೆ!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ನಾಡಿನಾದ್ಯಂತ ಎಸ್ಎಂಕೆ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಗುತ್ತಿದೆ. ಅಪಾರ ಅಭಿಮಾನಿಗಳು, ಕುಟುಂಬಸ್ಥರು, ರಾಜಕೀಯ ಮುಖಂಡರು ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ.ಎಸ್.ಎಂ ಕೃಷ್ಣ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಕೇಂದ್ರದ ಪರವಾಗಿ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ ಸೇರಿ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಅಗತ್ಯ ತಯಾರಿಗಳು ನಡೆದಿವೆ.
ಡಿಸಿಎಂ ಶಿವಕುಮಾರ್ ಸೇರಿ ಪ್ರಮುಖರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸೋಮನಹಳ್ಳಿಗೆ 10 ಗಂಟೆ ಬರಲಿರುವ ಕೃಷ್ಣರ ಪಾರ್ಥಿವ ಶರೀರವನ್ನು ಕಾಫಿ ಡೇ ಆವರಣದಲ್ಲಿ ಇಡಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಕ್ಕಲಿಗ ಸಂಪ್ರದಾಯದಂತೆ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ವೈದಿಕರಿಂದ ವಿಧಿ ವಿಧಾನ ಕಾರ್ಯಗಳು ನಡೆಯಲಿದೆ. ಗಂಧದ ಕಟ್ಟಿಗೆಳಿಂದ ಮೃತ ದೇಹವನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.