ಸರ್.ಎಂ ವಿಶ್ವೇಶ್ವರಯ್ಯ .. ಕನ್ನಡ ನಾಡಿನ ಹೆಮ್ಮೆಯ ಇಂಜಿನಿಯರ್. 1860 ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಹುಟ್ಟಿದ ವಿಶ್ವೇಶ್ವರಯ್ಯನವರು ವಿಶ್ವಮಟ್ಟದಲ್ಲಿ ಕರುನಾಡ ಕೀರ್ತಿ ಪತಾಕೆ ಹಾರಿಸಿದ ಮಹಾನ್ ವ್ಯಕ್ತಿ, ಭಾರತ ರತ್ನ..!
ಸರ್.ಎಂ ವಿ ಇಂಜಿನಿಯರ್ ಆಗಿ, ಮೈಸೂರು ಸಂಸ್ಥಾನದ ದಿವಾನರಾಗಿ ನೀಡಿದ ಕೊಡುಗೆಗಳ ಬಗ್ಗೆ ತಿಳಿದೇ ಇರುತ್ತೀರಿ. ಗೂಗಲ್ ಸರ್ಚ್ ಮಾಡಿದರೆ ಆ ಬಗ್ಗೆ ಅನೇಕ ಮಾಹಿತಿಗಳು ಸಿಗುತ್ತವೆ. ಇಲ್ಲಿ ಅಪರೂಪದ, ವಿಶೇಷ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ.

ಕಾಲ ಹಣದಂತೆ : ಸರ್.ಎಂ ವಿಶ್ವೇಶ್ವರಯ್ಯ ತಮ್ಮ ಬಂಧುಗಳ ಮಕ್ಕಳು ಎಸ್ ಎಸ್ ಎಲ್ ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸ್ ಆದಾಗ ಅವರಿಗೆ 100 ರೂ ಕೊಟ್ಟು ಪ್ರೋತ್ಸಾಹ ನೀಡುತ್ತಿದ್ದರು. ಹಾಗೆಯೇ ಒಮ್ಮೆ ಅವರ ಸಹೋದರನ ಮಗ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣನಾಗಿದ್ದ. ಆಗ ಅವರನ್ನು ಮನೆಗೆ ಬರ ಹೇಳಿದ್ದರು. ರಾತ್ರಿ 8 ಗಂಟೆಗೆ ಊಟಕ್ಕೆ ಬಾ ಅಂತ ಕರೆದಿದ್ದರೆ ಆತ 8 ಗಂಟೆ 45 ನಿಮಿಷಕ್ಕೆ ವಿಶ್ವೇಶ್ವರಯ್ಯನವರ ಮನೆಗೆ ಬಂದ. ಬಂದವನೇ ನೇರವಾಗಿ ಅವರ ರೂಮ್ ಗೆ ಹೋದ. ಅವನಿಗೆ ಲಕೋಟೆ ನೀಡಿದರು. ಅದರಲ್ಲಿ 25 ರೂ ಮಾತ್ರ ಇತ್ತು. 100 ರೂ ಬದಲು 25 ರೂ ಮಾತ್ರ ಯಾಕೆ ಎಂದು ಕೇಳಿದಾಗ. ಸರ್ ಎಂ ವಿ ಸಮಯ ಕೂಡ ಹಣದಂತೆ. ಮುಕ್ಕಾಲು ಗಂಟೆ ತಡವಾಗಿ ಬಂದಿದ್ದಕ್ಕೆ ಮುಕ್ಕಾಲು ಭಾಗ ಹಣ ಕಡಿತಮಾಡಿ ಕೊಟ್ಟಿದ್ದೇನೆ ಎಂದಿದ್ದರಂತೆ..!

ಸರ್ಕಾರದ ಕೆಲಸಕ್ಕೆ ಮಾತ್ರ ಸರ್ಕಾರಿ ಸೌಲಭ್ಯ, ವಸ್ತುಗಳು : ಆಗಿನ ಕಾಲದಲ್ಲಿ ಕರೆಂಟ್ ಇರಲಿಲ್ಲ. ಸರ್.ಎಂವಿ ಅವರಿಗ ಮೊಂಬತ್ತಿ ನೀಡಲಾಗುತ್ತಿತ್ತು. ಸರ್ಕಾರ ನೀಡಿದ ಮೊಂಬತ್ತಿಯನ್ನು ಸರ್ಕಾರಿ ಕೆಲಸಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ಸರ್ಕಾರ ಕೊಟ್ಟಿದ್ದ ಪೆನ್ಸಿಲ್ ಕೂಡ ಆ ಕೆಲಸಕ್ಕೇ ಮೀಸಲಾಗಿರುತ್ತಿತ್ತು..! ರಾಜೀನಾಮೆ ನೀಡಲು ಹೋಗುವಾಗ ಸರ್ಕಾರಿ ಕಾರಲ್ಲಿ ಹೋಗಿ, ವಾಪಸ್ ಬರುವಾಗ ಸ್ವಂತ ವಾಹನದಲ್ಲಿ ಬಂದಿದ್ದರು..!

ಫಿಟ್ನೆಸ್ ಮಂತ್ರ : ಸರ್.ಎಂ ವಿ ಫಿಟ್ನೆಸ್ ಗೂ ಆದ್ಯತೆ ನೀಡುತ್ತಿದ್ದರು. 102 ವರ್ಷದ ತುಂಬು ಜೀವನಕ್ಕೆ ಅವರ ಫಿಟ್ನೆಸ್ ಮಂತ್ರವೂ ಕಾರಣ. ವ್ಯಾಯಾಮ, ಟೆನ್ನಿಸ್ ಆಟ, ನಡಿಗೆಯನ್ನು ಅವರು ತಪ್ಪಿಸುತ್ತಿರಲಿಲ್ಲ.
ಮತ್ತೆ ಭಾಷಣ : ಹುಟ್ಟೂರಿನ ಶಾಲೆಯೊಂದಕ್ಕೆ ಹೋಗಿ ಒಮ್ಮೆ ಭಾಷಣ ಮಾಡಿದ್ದರು. ಆಮೇಲೆ ಅವರಿಗೆ ಅದು ಸರಿ ಇರಲಿಲ್ಲ ಎಂದು ಅನಿಸಿತ್ತು. ಪೂರ್ವ ತಯಾರಿ ಇಲ್ಲದೆ ಅವರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ತಮ್ಮ ಭಾಷಣ ಸರಿಯಾಗಲಿಲ್ಲ ಅನಿಸಿ, ಮತ್ತೆ ಪುನಃ ಶಾಲೆಗೆ ಹೋಗಿ ಭಾಷಣ ಮಾಡಿದ್ದರಂತೆ!

ಜೇಬಲ್ಲಿ ರಾಜೀನಾಮೆ ಪತ್ರ : ವಿಶ್ವೇಶ್ವರಯ್ಯನವರು ನೇರ, ದಿಟ್ಟ ವ್ಯಕ್ತಿತ್ವದವರು. ನಿಖರತೆಯನ್ನು ಕೆಲಸದಲ್ಲಿ ಬಯಸುತ್ತಿದ್ದರು. ತನ್ನ ಸ್ವಾಭಿಮಾನ, ನಿಷ್ಠೆ, ಕೆಲಸಕ್ಕೆ ಸ್ವಲ್ಪ ಭಂಗವಾದರೂ ಅವರು ಅಲ್ಲಿ ಮುಂದುವರೆಯುತ್ತಿರಲಿಲ್ಲ. ಹೀಗಾಗಿ ಯಾವಾಗಲೂ ರಾಜೀನಾಮೆ ಪತ್ರವನ್ನು ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು.
ಈ ಬಗ್ಗೆ ಡಿವಿಜಿಯವರು ಒಮ್ಮೆ ಪ್ರಶ್ನಿಸಿದ್ದರಂತೆ. ಅದಕ್ಕೆ ಸರ್ ಎಂವಿ, “ ನಾನು ಐದು ವರ್ಷ ನನ್ನ ಕೈಲಾದ ಸೇವೆ ಮಾಡಲು ಸಾಧ್ಯವಾಗಿದ್ದೇ ಈ ಪತ್ರದಿಂದ. ನಾನು ನಂಬಿದ ತತ್ವ , ಕೆಲಸಕ್ಕೆ ಕುಂದುಂಟಾದರೆ ಒಂದು ಕ್ಷಣವೂ ಇಲ್ಲಿರಲ್ಲ. ರಾಜೀನಾಮೆ ಕೊಟ್ಟು ಹೊರಡುತ್ತೇನೆ ಎಂದು ಮೊದಲೇ ಮಹಾರಾಜರಿಗೆ ತಿಳಿಸಿದ್ದೆ ‘’ ಎಂದಿದ್ದರಂತೆ.






