ಸಾರಿಗೆ ನೌಕರರ ಬೇಡಿಕೆ ಈಡೇರಿಸಿ: ರಾಜ್ಯ ಸರ್ಕಾರಕ್ಕೆ ಆರ್. ಅಶೋಕ್ ಆಗ್ರಹ
ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ತೀವ್ರವಾಗಿ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಈ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈ ಸರ್ಕಾರ ಪಾಪರ್ ಆಗಿದೆ. ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬಾರದು. ನೌಕರರ ಬೇಡಿಕೆಗಳನ್ನು ಇಡೀ ನೋಡು, ತಕ್ಕ ಪರಿಹಾರ ನೀಡಬೇಕು” ಎಂದರು.
ಸಾರ್ವಜನಿಕರಿಗೆ ಉಚಿತ ಬಸ್ ಸೌಲಭ್ಯ ನೀಡುತ್ತಿರುವ ಹೆಸರಿನಲ್ಲಿ ಸಾರಿಗೆ ನೌಕರರ ಸಂಪೂರ್ಣ ಕೂಲಿಯನ್ನೇ ಕತ್ತರಿಸಿರುವುದಾಗಿ ಆರೋಪಿಸಿದ ಅವರು, “ಇವತ್ತು ಫ್ರೀ ಬಸ್ ಕಟ್ ಆಗಿದೆ. ಸಿದ್ದರಾಮಯ್ಯ ಸರ್ ಹೇಳಿದ್ರು, ಖಜಾನೆ ತುಂಬಿ ಆಚೆ ಹೋಗ್ತಿದೆ ಅಂತ. ಹಾಗಾದ್ರೆ ನೌಕರರ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.
ಆರ್. ಅಶೋಕ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ತಮ್ಮ ಸಂಪುಟದಲ್ಲಿ ಸಾರಿಗೆ ಖಾತೆ ಹೊಂದಿದ್ದ ಅನುಭವವನ್ನು ಪ್ರಸ್ತಾಪಿಸಿ, “ನಾವು 15% ಸಂಬಳ ಹೆಚ್ಚಿಸಿದ್ದು, ₹480 ಕೋಟಿ ಬಿಡುಗಡೆ ಮಾಡಿದ್ದೆವು. ಎಲ್ಲಾ ಬೇಡಿಕೆಗಳನ್ನು ನಿಭಾಯಿಸಿದ್ದೆವು” ಎಂದು ಹೇಳಿದರು.