ಸಿಎಂಗೆ ಮತ್ತೆ ಶುರುವಾಯ್ತು ಮುಡಾ ಟೆನ್ಷನ್: ಲೋಕಾಯುಕ್ತರಿಂದ ಇಂದು ಅಂತಿಮ ವರದಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ಹಗರಣ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿದೆ. ಲೋಕಾಯುಕ್ತರು ಸಲ್ಲಿಸಿರುವ ‘ಬಿ ರಿಪೋರ್ಟ್’ ಕುರಿತು ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಲಿದೆ.
ಲೋಕಾಯುಕ್ತರ ‘ಬಿ ರಿಪೋರ್ಟ್’ ಅನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯವನ್ನು ಮೊರೆ ಹೋಗಿದ್ದರು. ಈ ಕುರಿತು ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಇಂದು ಅಂತಿಮ ತೀರ್ಪು ಹೊರಬೀಳಲಿದೆ.
ನ್ಯಾಯಾಲಯವು ‘ಬಿ ರಿಪೋರ್ಟ್’ ಅನ್ನು ಅಂಗೀಕರಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ದೊಡ್ಡ ನಿರಾಳತೆ ಸಿಗಲಿದೆ. ಆದರೆ, ಬಿ ರಿಪೋರ್ಟ್ ತಿರಸ್ಕೃತವಾದರೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಇದೇ ವೇಳೆ, ಪ್ರಕರಣದ ಅಂತಿಮ ವರದಿಯನ್ನು ಲೋಕಾಯುಕ್ತರು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ವರದಿ ಸಲ್ಲಿಕೆಯ ಬಳಿಕ ‘ಬಿ ರಿಪೋರ್ಟ್’ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ.
ಏನಿದು ಪ್ರಕರಣ?
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಯವರು ಮೂಡಾದಿಂದ ಪಡೆದಿದ್ದ 14 ಸೈಟ್‌ಗಳ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿತ್ತು. ಬಿ-ರಿಪೋರ್ಟ್‌ನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಖುದ್ದು ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಅವರೇ ವಾದಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ವರದಿ ಸಲ್ಲಿಸಲು 2 ತಿಂಗಳು ಗಡುವು ನೀಡಿ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮುನ್ನ ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್ ಪ್ರಶ್ನಿಸಿ ಇಡಿ ಸಹ ತಕರಾರು ಅರ್ಜಿ ಸಲ್ಲಿಸಿತ್ತು.






