ಶಿವಮೊಗ್ಗದ ಉದ್ಯಮಿ ಡಿ.ಟಿ ಪರಮೇಶ್ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ನಲ್ಲಿ 6 ಕೋಟಿ ರೂ. ಪತ್ತೆಯಾಗಿದೆ.
ಮಾ.28ರಂದು ನಡೆದ ಐಟಿ ಶೋಧದ ವೇಳೆ ಒಟ್ಟು 10 ಕೋಟಿ ರೂ. ಮೌಲ್ಯದ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಐಟಿ ಇಲಾಖೆ ಜಪ್ತಿ ಮಾಡಿತ್ತು. ಹಣವನ್ನು ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿತ್ತು ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ.
ಮಾ.28ರಂದು ಹಾಸನ, ಮಂಡ್ಯ, ಶಿವಮೊಗ್ಗ ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಎಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ನಡೆದ ದಿನವೇ ಸಿಎಂ ಕುಮಾರಸ್ವಾಮಿ, ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಘಟನಾನುಘಟಿಗಳು ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರ, ಐಟಿ ಇಲಾಖೆ ಹಾಗೂ ತನಿಖಾ ವಿಭಾಗದ ನಿರ್ದೇಶಕ ಬಾಲಕೃಷ್ಣನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕೀ ಕಳೆದಿದೆ ಎಂದು ಸಬೂಬು
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ರಾಜಕಾರಣಿಗಳಿಗೆ ಕಳುಹಿಸಿಕೊಡಲು ಡಿ.ಟಿ.ಪರಮೇಶ್ ಅವರು ಹಣ ಸಂಗ್ರಹಿಸಿಟ್ಟಿದ್ದಾರೆಂಬ ಖಚಿತವಾದ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ನಡೆಸಿದ ದಾಳಿ ಪೈಕಿ ಪರಮೇಶ್ ಅವರ ಸ್ಥಳಗಳು ಸೇರಿದ್ದವು. ಶೋಧದ ವೇಳೆ ಪರಮೇಶ್ ಅವರು ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್‌ಗಳಲ್ಲಿ ಲಾಕರ್ ಹೊಂದಿರುವ ಮಾಹಿತಿ ಸಿಕ್ಕಿತ್ತು. ವಿಚಾರಿಸಿದಾಗ ಲಾಕರ್ ಕೀ ಕಳೆದು ಹೋಗಿವೆ ಎಂದು ಹೇಳಿದ್ದರು.
ಆಗ ಲಾಕರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಪ್ರತಿಬಂಧಕ ಆದೇಶವನ್ನು ಹೊರಡಿಸಲಾಗಿತ್ತು. ಕೊನೆಗೆ ಏ.4ರಂದು ಲಾಕರ್‌ಗಳ ಬೀಗ ಮುರಿಯಲು ನಿರ್ಧರಿಸಲಾಗಿತ್ತು. ಆದರೆ, ಅದೇ ದಿನವೇ ಲಾಕರ್ ಕೀಗಳು ಸಿಕ್ಕಿವೆ ಎಂದು ಹೇಳಿದ ಪರಮೇಶ್ ಅವರು ಐಟಿ ಅಧಿಕಾರಿಗಳಿಗೆ ತಿಳಿಸಿ ಕೀಗಳನ್ನು ಒಪ್ಪಿಸಿದರು. ತೆರೆದು ಪರಿಶೀಲಿಸಿದಾಗ 6 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.