ಸಿದ್ದರಾಮಯ್ಯ ದೆಹಲಿಯಲ್ಲಿ ಕೂತು ಕೇಂದ್ರದ ವಿರುದ್ಧ ಕುತಂತ್ರ ಮಾಡಿದ್ದಾರೆ: ಬಿವೈ ವಿಜಯೇಂದ್ರ!
ಬೆಂಗಳೂರು:- ಸಿದ್ದರಾಮಯ್ಯ ದೆಹಲಿಯಲ್ಲಿ ಕೂತು ಕೇಂದ್ರದ ವಿರುದ್ಧ ಕುತಂತ್ರ ಮಾಡಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕುಳಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ, ಕುತಂತ್ರ ಮತ್ತು ಷಡ್ಯಂತ್ರ ಮಾಡಿದ್ದಾರೆ ಎಂದರು. ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ, 16ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ.
ರಾಜ್ಯದ ಪರವಾಗಿ ವಿಚಾರಮಂಡನೆ ಮಾಡಿದ್ದು, ಅವರಿಗೆ ಅಭಿನಂದನೆಗಳು. ಕೇಂದ್ರದ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳಿಗೆ ಮುಜುಗರವೇ, ಇವರು ರಾಜ್ಯದ ಮುಖ್ಯಮಂತ್ರಿಯೇ ಅಥವಾ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳೇ. ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿ ಹಣಕಾಸಿನ ವಿಚಾರ ಪ್ರಸ್ತಾಪ ಮಾಡಿ, ಸರಿಪಡಿಸಿ ಎಂದು ಹೇಳಿದ್ದಾರೆ ಎಂದರು.
ದೆಹಲಿ ಸಭೆಯಲ್ಲಿ ಭಾಗವಹಿಸಿದ್ದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಗಳನ್ನು ನೋಡಿದರೆ ಪಾಪ ಅನಿಸುತ್ತದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೋಢೀಕರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಹಾಗಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕರ್ನಾಟಕವು 100 ರೂ. ಕೊಟ್ಟರೆ ಕೇವಲ 13 ರೂ. ಬರುತ್ತಿದೆ ಎಂದು ಅರ್ಧಸತ್ಯವನ್ನಷ್ಟೇ ಅವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.