ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಪರವಾಗಿ ನಟರಾದ ಯಶ್ ಮತ್ತು ದರ್ಶನ್ ಬಿರುಸಿನ ಪ್ರಚಾರ ನಡೆಸಿದ್ದಾರೆ.
4 ದಿನಗಳಿಂದ ಬಿರುಗಾಳಿ ಪ್ರಚಾರ ನಡೆಸಿದ್ದ ದರ್ಶನ್ ಇಂದಿನಿಂದ 4 ದಿನಗಳ ಕಾಲ ಪ್ರಚಾರಕ್ಕೆ ಬಿಡುವು ನೀಡಿದ್ದಾರೆ. ಬಲಗೈ ನೋವಿನ ನಡುವೆಯೂ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಕೈಕುಲುಕುವುದು, ಮುತ್ತಿಕ್ಕುತ್ತಿದ್ದ ಕಾರಣ ಕೈ ನೋವು ಹೆಚ್ಚಾಗಿದೆ.
ಅಲ್ಲದೆ, ವಾಹನ ಇಳಿಯುವ ಸಂದರ್ಭದಲ್ಲಿ ಮತ್ತೆ ಪೆಟ್ಟಾಗಿದೆ. ನಿರಂತರವಾಗಿ ನಿಂತುಕೊಂಡೇ ಪ್ರಚಾರ ನಡೆಸಿರುವ ಕಾರಣ ಬೆನ್ನು ನೋವಾಗಿದೆ ಎನ್ನಲಾಗಿದ್ದು, 4 ದಿನಗಳ ಕಾಲ ಚಿಕಿತ್ಸೆ, ವಿಶ್ರಾಂತಿ ಪಡೆಯಲಿದ್ದಾರೆ. 4 ದಿನಗಳ ನಂತರ ಮತ್ತೆ ಅವರು ಬಿರುಗಾಳಿ ಪ್ರಚಾರ ನಡೆಸಲಿದ್ದಾರೆ.
ಯಶ್ ಮತ್ತು ಸುಮಲತಾ ಅವರು ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಪ್ರವಾಸ ಕೈಗೊಂಡಿದ್ದು, ವಿವಿಧ ಕಡೆ ಪ್ರಚಾರ ನಡೆಸಿ ಮತ ಯಾಚಿಸಲಿದ್ದಾರೆ.