ಸುರ್ಜೇವಾಲಾ ನೀಡಿದ ಮಾಹಿತಿಯನ್ನು ಆಧರಿಸಿ ಶಾಸಕರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಸುರ್ಜೇವಾಲಾ ನೀಡಿದ ಮಾಹಿತಿಯನ್ನು ಆಧರಿಸಿ ಶಾಸಕರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುರ್ಜೆವಾಲ ಅವರು ಶಾಸಕರನ್ನು ಭೇಟಿ ಮಾಡಿದ ಬಳಿಕ ಅನೇಕ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದು,
ಶಾಸಕರ ಅಹವಾಲುಗಳ ವಿಚಾರವಾಗಿ ಸಿಎಂ ಸಭೆ ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಈ ಬಗ್ಗೆ ನನಗೆ ಯಾವುದೇ ಆಕ್ಷೇಪ ಇಲ್ಲ. ಈ ವಿಚಾರದಲ್ಲಿ ನನಗೆ ಏನೂ ಕಷ್ಟವಾಗದಿದ್ದರೂ, ನಿಮಗೆ ಏಕೆ (ಮಾಧ್ಯಮಗಳು) ಕಷ್ಟವಾಗುತ್ತಿದೆ ” ಎಂದು ಮರುಪ್ರಶ್ನಿಸಿದರು.
ನೀವು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿದ್ದು ನಿಮ್ಮನ್ನು ಕರೆದಿಲ್ಲ ಎಂದಾಗ, “ಈ ವಿಚಾರವಾಗಿ ನನಗೆ ಯಾವುದೇ ಆಕ್ಷೇಪವಿಲ್ಲ. ಬೆಂಗಳೂರಿನ ಅಭಿವೃದ್ದಿಗೆ ನಾವು ಪ್ರತ್ಯೇಕ ಅಜೆಂಡಾ ಹೊಂದಿರುವ ಕಾರಣಕ್ಕೆ ಆನಂತರ ಚರ್ಚೆ ನಡೆಸುತ್ತೇವೆ. ಬೆಂಗಳೂರಿನ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಾನು ಸಹ ಒಂದಷ್ಟು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇನೆ” ಎಂದರು.