ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು:- ರಾಜ್ಯದಲ್ಲಿ ಮತ್ತೆ ಜಾತಿ ಜನಗಣತಿ ಸಮೀಕ್ಷೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಮಧುಸೂದನ್ ನಾಯಕ್ ಸಮಿತಿ ಸಮೀಕ್ಷೆ ನಡೆಸಲಿದ್ದು, ಇದು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ಹಲವು ಜಾತಿ, ಧರ್ಮಗಳಿವೆ; ವೈರುಧ್ಯ ಮತ್ತು ಅಸಮಾನತೆ ಇದೆ ಎಂದು ಹೇಳಿದರು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ನೀಡಬೇಕು ಎಂದು ಹೇಳುತ್ತದೆ ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಸಿಎಂ, “ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಅಸಮಾನತೆ ಹೋಗಬೇಕು. ಅಸಮಾನತೆ ಮುಂದುವರಿದರೆ ನರಳುವ ಜನರಿಂದ ಪ್ರಜಾಪ್ರಭುತ್ವದ ಸೌಧವೇ ಧ್ವಂಸವಾಗಬಹುದು” ಎಂದು ಎಚ್ಚರಿಸಿದರು.