ಸ್ಯಾಂಡಲ್ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ವಿಧಿವಶ!
ಸ್ಯಾಂಡಲ್ವುಡ್ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ಮುಂಜಾನೆ 3.30ಕ್ಕೆ ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸು.
ಬ್ರೇನ್ ಸ್ಟ್ರೋಕ್ನಿಂದ ಬಳಲುತ್ತಿದ್ದ ದಿನೇಶ್, ಕಳೆದ 5 ದಿನಗಳಿಂದ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ದಿನೇಶ್ ಅವರು ಕಲಾ ನಿರ್ದೇಶಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿ, ಬಳಿಕ ನಟರಾಗಿ ಖ್ಯಾತಿ ಗಳಿಸಿದರು. ‘ಕೆಜಿಎಫ್’ ಚಾಪ್ಟರ್ 1ರಲ್ಲಿ ಬಾಂಬೆ ಡಾನ್ ಪಾತ್ರ, ‘ರಿಕ್ಕಿ’, ‘ಹರಿಕಥೆ ಅಲ್ಲ ಗಿರಿಕಥೆ’, ‘ಉಳಿದವರು ಕಂಡಂತೆ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ದಿನೇಶ್, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗ ದುಃಖಕ್ಕೀಡಾಗಿದೆ.