ದೇಶವ್ಯಾಪಿ 74 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡಿಸಿ, ನಮಗೆ ಸ್ವಾತಂತ್ರ್ಯ ತಂದುಕೊಟ್ಟವರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದ ಇತಿಹಾಸಪಿಟಗಳನ್ನು ತಿರುವಿದರೆ ಅದೆಷ್ಟೋ ರೋಚಕಗಳು ತೆರೆದುಕೊಳ್ಳುತ್ತವೆ. ಅಂತಹ ರೋಚಕ ರೋಮಾಂಚಕ ಸ್ಥಳ ಸುಬ್ಬರಾಯನ ಕೆರೆ.
ಹೌದು, ಸ್ವಾತಂತ್ರ್ಯ ಹೋರಾಟದ ಸ್ಮರಣೆ ಬಂದಾಗಲೆಲ್ಲಾ ಸುಬ್ಬರಾಯನ ಕೆರೆಯ ನೆನಪಾಗುತ್ತದೆ. ಅಂದಹಾಗೆ ಈ ಸುಬ್ಬರಾಯನ ಕೆರೆ ಇರುವುದು ನಮ್ಮ ಕರ್ನಾಟಕದಲ್ಲೇ. ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿರುವ ಸುಬ್ಬರಾಯನ ಕೆರೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿತ್ತು.
ಹೌದು, ಅರಮನೆನಗರಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸುಬ್ಬರಾಯನ ಕೆರೆ ಅತ್ಯಂತ ಚಿರಪರಿಚಿತ ಸ್ಥಳ. ಇಡೀ ದೇಶದಲ್ಲಿ ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವ
ಸರ್ಕಾರದೊಂದಿಗೆ ವಿಲೀನಗೊಂಡ ಮೊಟ್ಟಮೊದಲ ರಾಜ್ಯವೆಂದರೆ ಮೈಸೂರು ಸಂಸ್ಥಾನ.
ಮೈಸೂರು ಸಂಸ್ಥಾನ ದೇಶದ ಪ್ರಜಾಪ್ರಭುತ್ವದೊಂದಿಗೆ ವಿಲೀನಗೊಂಡು ರಾಜತ್ವ ತ್ಯಜಿಸಲು ಮುಂದಾಗಿದ್ದರ ಹಿಂದೆ ಸುಬ್ಬರಾಯನಕೆರೆಯ ಪಾತ್ರವೂ ಇದೆ. ಇಡೀ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಂದರ್ಭದಲ್ಲಿ ಮೈಸೂರಿನಲ್ಲೂ ಹೋರಾಟ ಉತ್ತುಂಗಕ್ಕೆ ತಲುಪಿತ್ತು. ಆಗ ಇದೇ ಸುಬ್ಬರಾಯನಕೆರೆಯ ಮೈದಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿತ್ತು.
ಇದೇ ಸುಬ್ಬರಾಯನ ಕೆರೆಯ ಮೈದಾನದಲ್ಲಿ
ಸ್ವಾತಂತ್ರ್ಯ ಸೇನಾನಿಗಳು ಭಾಷಣ ಮಾಡುತ್ತಿದ್ದರೆ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಜನ ಸಾವಿರಾರು ಸಂಖ್ಯೆಯಲ್ಲಿ ಇದೇ ಸ್ಥಳದಲ್ಲಿ ನಿಂತು ಎಲ್ಲವನ್ನು ಆಲಿಸುತ್ತಿದ್ದರು. ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತಿದ್ರು.
1920ರ ಸಂದರ್ಭದಲ್ಲಿ ತಗಡೂರು ರಾಮಚಂದ್ರರಾವ್, ಎಂ.ಎನ್. ಜೋಯಿಸ್, ಅಗರಂ ರಂಗಯ್ಯ ಹಾಗೂ ಪಾಲಹಳ್ಳಿ ಸೀತಾರಾಮಯ್ಯರಂತಹ ದಿಗ್ಗಜರು ಇಲ್ಲಿ ನಿಂತು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರೇರೇಪಿಸುತ್ತಿದ್ದು ಇಂದಿಗೂ ಇತಿಹಾಸಪುಟದಲ್ಲಿ ದಾಖಲಾಗಿದೆ.
ಮೈಸೂರು ಪ್ರಾಂತ್ಯದಲ್ಲೂ ಆಗ ಸಾಕಷ್ಟು ಚಳವಳಿಗಳು ನಡೆದಿದ್ದವು. ಶಿವಪುರ ಸತ್ಯಾಗ್ರಹ, ಧ್ವಜ ಸತ್ಯಾಗ್ರಹ, ಮೈಸೂರು ಚಲೋ ಹೀಗೆ ಅನೇಕ ಚಳವಳಿಗಳು ಸ್ವಾತಂತ್ರ್ಯ ಹೋರಾಟವನ್ನು ಉದ್ದೀಪನಗೊಳಿಸಿದ್ದವು. ಈ ಚಳವಳಿಗಳು ಹೇಗಿದ್ದವೆಂದರೆ ರೈಲ್ವೆಗಳು ಹಾಗೂ ದೂರವಾಣಿ ಸಂಪರ್ಕಗಳನ್ನು ಧಕ್ಕೆ ಮಾಡುವುದರ ಮೂಲಕ ಪರಾಕಾಷ್ಠೆ ತಲುಪಿತ್ತು. ಅಂದಿನ ಕಾಲದಲ್ಲೇ ಹೀಗೆ ಹೋರಾಟ ಮಾಡಿ ಏಕಕಾಲಕ್ಕೆ 6 ಸಾವಿರ ಮಂದಿ ಸೆರೆವಾಸ ಅನುಭವಿಸಿದ್ದು ಇತಿಹಾಸವಾಗಿ ಉಳಿದಿದೆ.
ಇಡೀ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಸಂಸ್ಥಾನಕ್ಕೆ ಇನ್ನು ಸ್ವಾತಂತ್ರ್ಯ ಬಂದಿರಲಿಲ್ಲ. ಆಗ ಶುರುವಾದ ಮೈಸೂರು ಚಲೋ ಇಡೀ ವರ್ಷ ನಡೆದಿತ್ತು. ಇದರ ಪ್ರತೀಕವಾಗಿ 1948ರಲ್ಲಿ
ಮೈಸೂರು ಸಂಸ್ಥಾನ ಅಧಿಕೃತವಾಗಿ ಭಾರತದ ಪ್ರಜಾಪ್ರಭುತ್ವಕ್ಕೆ ವಿಲೀನಗೊಂಡಿತ್ತು. ಇಂತಹ
ದಿಟ್ಟ ನಿರ್ಧಾರ ಕೈಗೊಂಡು ದೇಶದ ಇತರ ಸಂಸ್ಥಾನದ ರಾಜರಿಗೆ ಮಾದರಿಯಾದವರು
ಮಹಾರಾಜ ದಿ. ನಾಲ್ವಡಿ ಕೃಷ್ಣರಾಜ ಒಡೆಯರ್. ಹೀಗೆ ಮೈಸೂರು ಚಲೋ ಚಳವಳಿಯ ಭಾಷಣಗಳಿಗೂ ಸಹ ಸುಬ್ಬರಾಯನಕೆರೆ ಸಾಕ್ಷಿಯಾಗಿತ್ತು ಅನ್ನೋದೇ ವಿಶೇಷ.
ಇನ್ನು ಮೈಸೂರು ನಗರದ ಮಧ್ಯೆ ನಾರಾಯಣಶಾಸ್ತ್ರಿ ರಸ್ತೆಯಲ್ಲೇ ಇರುವ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಎಲ್ಲರಿಗೂ ನೆಚ್ಚಿನ ತಾಣ. ಈ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸುವ ವಿಶಾಲವಾದ ಜಾಗವಾದ್ದರಿಂದ ಗುಪ್ತ ಸಂದೇಶದ ಮೂಲಕ ಇಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನ ಸೇರುತ್ತಿದ್ದರು. ಈ ಸುಬ್ಬರಾಯನಕೆರೆ ಕಾಯುವ
ಸಲುವಾಗಿಯೇ ಬ್ರಿಟಿಷ್ ಸರ್ಕಾರ ಪೊಲೀಸರನ್ನು ನೇಮಕ ಮಾಡಿತ್ತು. ಸುಬ್ಬರಾಯನ ಕೆರೆ ಕಡೆ ಯಾರೂ ಕೂಡ ಧಾವಿಸದಂತೆ ತಡೆಯುವುದೇ ಬ್ರಿಟಿಷ್ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
ಹೀಗೆ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯ ತಾಣವಾಗಿದ್ದನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಈಗಲೂ ಸ್ಮರಿಸುತ್ತಾರೆ. ಸ್ವಾತಂತ್ರ್ಯ ಚಳವಳಿಗೆ ಧ್ಯೋತಕವಾಗಿರೋ ಸುಬ್ಬರಾಯನಕೆರೆಯನ್ನು ಮೈಸೂರಿಗರು ಈಗ ಫ್ರೀಡಂ ಪಾರ್ಕ್ ಅಂತಾ ಪ್ರೀತಿ, ಹೆಮ್ಮೆ ಮತ್ತು ಗರ್ವದಿಂದ ಕರೆಯುತ್ತಾರೆ. ಇದೇ ಕಾರಣಕ್ಕೆ ಇಲ್ಲಿ ಸ್ವಾತಂತ್ರ್ಯ ಪೂರ್ವ ಅನೇಕ ಘಟನಾವಳಿ ನೆನಪಿಸುವ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಮಹಾತ್ಮ ಗಾಂಧೀಜಿಯವರ ದಂಡಿ ಸತ್ಯಾಗ್ರಹ ಹಾಗೂ ಭಗತ್ ಸಿಂಗ್, ರಾಜ್ ಗುರು, ಸುಖದೇವ್ರನ್ನು ನೇಣಿಗೆ ಹಾಕಿದ್ದನ್ನು ಚಿತ್ರಿಸುವ ಪ್ರತಿಕೃತಿ ಎಲ್ಲರನ್ನು ಜಾಗೃತಗೊಳಿಸುತ್ತದೆ.
ಸ್ವಾತಂತ್ರ್ಯ ಪೂರ್ವದ ಘಟನೆಗಳನ್ನು ನೆನಪಿಸುತ್ತಾ ಈಗಲೂ ಸುಬ್ಬರಾಯನಕೆರೆ ಸಾಕ್ಷಿ ಪ್ರಜ್ಞೆಯಾಗಿ ನಿಂತಿದೆ. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವೆಂದೇ ಪ್ರಸಿದ್ಧಿ ಪಡೆಯುವುದರ ಮೂಲಕ ಸಾಂಸ್ಕೃತಿಕ ನಗರಿಯ ಹಿರಿಮೆಯಾಗಿ ಉಳಿದುಕೊಂಡಿದೆ.