ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ
ಬೆಂಗಳೂರು: ಹಾಸನ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವದ ಸಂದರ್ಭದಲ್ಲಿ ಹೀಗೆ ಆಗಿರುವುದು ನೋವು ತಂದಿದೆ. ಸರ್ಕಾರ ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಮೃತರೆಲ್ಲ ಹಳ್ಳಿಯವರಾಗಿರುವುದರಿಂದ 10 ಲಕ್ಷ ರೂ. ಪರಿಹಾರ ನೀಡಬೇಕು,” ಎಂದು ಮನವಿ ಮಾಡಿದರು.
“ನಾನು ಹಾಸನಕ್ಕೆ ತೆರಳುತ್ತೇನೆ. ಡಿಸಿ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಗಾಯಾಳುಗಳನ್ನು ಬೆಂಗಳೂರಿಗೆ ಅಥವಾ ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದರು.
ಧರ್ಮಸ್ಥಳ ಕೇಸ್ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, “ತನಿಖೆಯಲ್ಲಿ ಸರ್ಕಾರ ನಿಧಾನ ತಾಳುತ್ತಿದೆ. ಯಾರನ್ನೋ ರಕ್ಷಿಸಲು ಸರ್ಕಾರ ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್ಐಟಿ ಬುರುಡೆ ಅಗೆದಷ್ಟೇ ಉತ್ಸಾಹ ತನಿಖೆ ನಡೆಸುವುದರಲ್ಲಿ ಕಾಣಿಸುತ್ತಿಲ್ಲ. ಆಮೆಯ ಗತಿಯಲ್ಲಿ ತನಿಖೆ ನಡೆಯುತ್ತಿದೆ. ಸರ್ಕಾರವೇ ತನಿಖೆಯನ್ನು ನಿಧಾನಗತಿಯಲ್ಲಿ ನಡೆಸಲು ಸೂಚನೆ ಕೊಟ್ಟಂತಿದೆ,” ಎಂದು ವಾಗ್ದಾಳಿ ನಡೆಸಿದರು.