ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!
ಹೃದಯಾಘಾತದಿಂದ ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಮಾಲತಿ, ಪುತ್ರಿ ದೋಸ್ತಿಯನ್ನು ಅಗಲಿದ್ದಾರೆ. ಅವರಿಗೆ 61ವರ್ಷ ವಯಸ್ಸಾಗಿತ್ತು.
ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಅವರ ನಿಧನಕ್ಕೆ ಕುಟುಂಬ ವರ್ಗ, ಅವರ ಅಭಿಮಾನಿಗಳು, ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಂಗಭೂಮಿಯ ಹೊರತಾಗಿಯೂ ಅವರು ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಯದ್ವಾ ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟಿಸಿದ್ದು, ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಲನಚಿತ್ರಗಳಲ್ಲಿಯೂ ತಮ್ಮ ಕಲೆ ಪ್ರದರ್ಶಿಸಿರುವ ಅವರು ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶ್ಯಾಮಭಾಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟನಷ್ಟೇ ಅಲ್ಲದೆ ನಿರ್ಮಾಪಕರೂ ಆಗಿರುವ ಅವರು ಐಡಿಯಾ ಮಾಡ್ಯಾರ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ರಾಮ ಶ್ಯಾಮ ಭಾಮ ಚಿತ್ರಕ್ಕೆ ಸಂಭಾಷಣೆ ಬರೆದು, ಕಮಲಹಾಸನ್ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಆಡುಭಾಷೆ ಬಳಸುವ ಮೂಲಕ ಹೊಸ ಅಳತೆಯ ಪ್ರಯೋಗ ಮಾಡಿದ್ದಾರೆ.