ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಪೋಟಿಸುವ ಬೆದರಿಕೆ..!
ಹುಬ್ಬಳ್ಳಿ: ಇತ್ತೀಚೆಗೆ ಕರ್ನಾಟಕದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗಿವೆ. ತಿಂಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದ ಇಂಡಿಗೋ ವಿಮಾನಕ್ಕೆ ಬೆದರಿಕೆ ಸಂದೇಶ ಬಂದಿತ್ತು. ಅದಾದ ಕೆಲವು ದಿನಗಳ ನಂತರ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಬಂದಿತ್ತು.
ಬೆಂಗಳೂರಿನ, ಹಾಸನದ, ಉಡುಪಿಯ ಕೆಲವು ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ವಿಮಾನ ನಿಲ್ದಾಣದ ನಿರ್ದೇಶಕರಿಗೆ ಈ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದ್ದು, ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಪ್ರಯಾಣಿಕರ ತಪಾಸಣೆಯನ್ನು ಹೆಚ್ಚಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸ್ ಅಧಿಕಾರಿಗಳು, ಆಂತರಿಕ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆಯ ಸಿಬ್ಬಂದಿಗಳು ತೀವ್ರ ನಿಗಾವಹಿಸಿದ್ದಾರೆ.