ಹೈದರಾಬಾದ್ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದ ಸಾನಿಯಾ ಮಿರ್ಜಾ ತಂದೆ

admin
1 Min Read

14ನೇ ಆವೃತ್ತಿಯ ಐಪಿಎಲ್ ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಖುಷಿ ತಂದಂತಿಲ್ಲ. ಟೂರ್ನಿಯ ಮೊದಲ ಎರಡೂ ಪಂದ್ಯಗಳನ್ನು ಸಹ ಕೈಚೆಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ. ಸನ್ ರೈಸರ್ ಹೈದರಾಬಾದ್ ಮೊದಲನೇ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್‌ಗಳಿಂದ ಸೋತಿತ್ತು ಹಾಗೂ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದೆ.

 

ಇದೀಗ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಹೆಚ್ಚು ಗೆಲುವುಗಳನ್ನು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ಸ್ಥಳೀಯ ಆಟಗಾರರನ್ನು ಐಪಿಎಲ್ ಹರಾಜಿನಲ್ಲಿ ಖರೀದಿಸಿಲ್ಲ, ತೆಲುಗು ರಾಜ್ಯಗಳ ಆಟಗಾರರಾದ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ ಮತ್ತು ಅಂಬಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ಆಡಿರುವ ಅನುಭವವಿರುವ ಮತ್ತೊಬ್ಬ ಸ್ಥಳೀಯ ಆಟಗಾರ ಹನುಮ ವಿಹಾರಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ , ಸನ್ ರೈಸರ್ಸ್ ಹೈದರಾಬಾದ್ ಕೂಡ ವಿಹಾರಿಯನ್ನು ಕಡೆಗಣಿಸಿತು ಎಂದು ಇಮ್ರಾನ್ ಮಿರ್ಜಾ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

 

 

ಸ್ಥಳೀಯ ಆಟಗಾರರನ್ನು ಕಡೆಗಣಿಸಿರುವುದರ ಕುರಿತು ಬೇಸರ ವ್ಯಕ್ತಪಡಿಸಿದ ಇಮ್ರಾನ್ ಮಿರ್ಜಾ ಹೈದರಾಬಾದ್‌ನಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳನ್ನು ಆಯೋಜಿಸದೆ ಇರುವ ಕುರಿತು ಕೂಡ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ದಿನದಿಂದ ದಿನಕ್ಕೆ ಬೆಂಬಲವನ್ನು ಕಳೆದುಕೊಳ್ಳುತ್ತಿದ್ದು ಈ ಬಾರಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವುದಿಲ್ಲ ಎನಿಸುತ್ತದೆ ಎಂದು ಭವಿಷ್ಯ ನುಡಿಯುವ ಮೂಲಕ ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಎಂದು ಇಮ್ರಾನ್ ಮಿರ್ಜಾ ಟ್ವೀಟ್ ಮಾಡಿದ್ದಾರೆ.

TAGGED:
Share This Article
Leave a Comment