2015 ಮುಗಿದೇ ಹೋಯಿತು..! 2016ಕ್ಕೆ ಭವ್ಯ ಸ್ವಾಗತ ಕೋರಲು ಎಲ್ಲರೂ ಕಾಯ್ತಾ ಇದ್ದೇವೆ..! 2015 ಅನ್ನೋದು ಇತಿಹಾಸದ ಪುಟ ಸೇರ್ತಾ ಇದೆ..! ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆ ಆಗಿದೆ..! ಕ್ರೀಡೆ ವಿಚಾರದಲ್ಲಂತೂ ಭಾರತಕ್ಕೆ 2015 ಅವಿಸ್ಮರಣೀಯವಾಗಿದೆ..! 2015ರ ಭಾರತ ಕ್ರೀಡಾ ಕ್ಷೇತ್ರದ ಕೆಲವೊಂದು ಮುಖ್ಯಾಂಶಗಳತ್ತ ಹಾಗೇ ಸುಮ್ಮನೇ ಗಮನ ಹರಿಸಿ ಬರೋಣ.
1. ಅರ್ಚರಿ (ಬಿಲ್ಲುವಿದ್ಯೆ) :
ಅಕ್ಟೋಬರ್ನಲ್ಲಿ ಮೆಕ್ಸಿಕೋದಲ್ಲಿ ನಡೆದ `ಅರ್ಚರಿ ವಿಶ್ವಕಪ್-2015’ನಲ್ಲಿ ಭಾರತದ ಬಿಲ್ಲುಗಾರರಾದ `ಅಭಿಷೇಕ್ ವರ್ಮಾ’, `ದೀಪಿಕಾ ಕುಮಾರಿ’ ಇಬ್ಬರೂ ಕೂಡ ಬೆಳ್ಳಿ ವಿಜೇತರಾದರು. ದೀಪಿಕಾಗೆ ವಿಶ್ವಕಪ್ನಲ್ಲಿ ದಕ್ಕಿದ ನಾಲ್ಕನೇ ಬೆಳ್ಳಿ ಪದಕ ಇದಾಗಿದೆ..! ಈ ಸಾಧನೆ ಭಾರತದ ಮಹತ್ವಾಕಾಂಕ್ಷಿ ಬಿಲ್ಲುಗಾರರಿಗೆ ಸ್ಪೂರ್ತಿಯಾಗಿದೆ.
2. ಬ್ಯಾಡ್ಮಿಂಟನ್ :
2015ರ ಆರಂಭದಲ್ಲೇ (ಜನವರಿ) ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೇಹ್ವಾಲ್ `ಇಂಡಿಯನ್ ಓಪನ್ ಗ್ರಾಂಡ್ ಪಿಕ್ಸ್’ನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಈ ಸಾಧನೆಯಿಂದಾಗಿ ಸೈನಾ ಮಹಿಳಾ ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ ವಿಶ್ವದ ನಂ 1 ಆಟಗಾರ್ತಿಯಾಗಿ ಹೊರ ಹೊಮ್ಮಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಗೌರವಕ್ಕೂ ನೆಹ್ವಾಲ್ ಪಾತ್ರರಾದರು.
ಅಷ್ಟೇ ಅಲ್ಲದೇ `ಅಶ್ವಿನಿ ಪೊನ್ನಪ್ಪ ಜ್ವಾಲಾ ಗುಟ್ಟಾ ಜೋಡಿ ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಿತ ಡಚ್ ಜೋಡಿ `ಎಫ್ಜೆ ಮುಸ್ಕೆನ್ಸ್ ಮತ್ತು ಸೆಲೆನಾ ಪಿಕ್’ರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.
3. ಬ್ಯಾಸ್ಕೆಟ್ಬಾಲ್ :
ಜೂನ್ 2015ರಲ್ಲಿ, ಪಂಜಾಬ್ನ ಸತ್ನಮ್ ಸಿಂಗ್ ಬಮರ 2015ನೇ ಸಾಲಿನ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಸಂಸ್ಥೆಗೆ (ಎನ್.ಬಿ.ಎ) ಆಯ್ಕೆಯಾಗಿದ್ದಾರೆ. ಎನ್ಬಿಎ ಕರಡಿಗೆ ಆಯ್ಕೆಯಾದ ಭಾರತದ ಮೊದಲ ಬ್ಯಾಸ್ಕೆಟ್ಬಾಲ್ ಆಟಗಾರರೆಂಬ ಕೀರ್ತಿಗೂ ಸತ್ನಾಮ್ ಈ ಮೂಲಕ ಪಾತ್ರರಾದರು.
4. ಬಿಲಿಯರ್ಡ್ಸ್ :
ಸೆಪ್ಟೆಂಬರ್ನಲ್ಲಿ ಪಂಕಾಜ್ ಅಡ್ವಾಣಿ ಸಿಕ್ಸ್-ರೆಡ್ ವರ್ಲ್ಡ್ ಚಾಂಪಿಯನ್ ಶಿಪ್ನಲ್ಲಿ ಗೆಲುವಿನ ನಗೆ ಬೀರಿದರು. ನವೆಂಬರ್ನಲ್ಲಿ ಐ.ಬಿ.ಎಸ್.ಎಫ್. ವರ್ಲ್ಡ್ ಸ್ನೂಕರ್ ಚಾಂಪಿಯನ್ಶಿಪ್ ನಲ್ಲಿ 15ನೇ ಬಾರಿ ಪ್ರಶಸ್ತಿ ಗೆದ್ದರು. ಇವರು ಭಾರತದ ಅತ್ಯಂತ ಯಶಸ್ವಿ ಬಿಲಿಯರ್ಡ್ಸ್ ಆಟಗಾರರಾಗಿದ್ದು, ಇವರ ಸಾಧನೆಗೆ ನಿರಂತರ ಮುಂದುವರೆದಿದೆ..! ಆಕಾಶವೇ ಇವರ ಮಿತಿ..!
5 ಬಾಕ್ಸಿಂಗ್ :
ನವಂಬರ್ನಲ್ಲಿ ಶಿವ ಥಾಪಾ ಭಾರತದ ಅಗ್ರ ಶ್ರೇಯಾಂಕಿತ ಆಟಗಾರನಾಗಿ, ಅಂತರಾಷ್ಟ್ರೀಯಾ ಶ್ರೇಯಾಂಕದಲ್ಲಿ ಎರಡನೇ ಬಾಕ್ಸರ್ ಎಂಬ ಪಟ್ಟವನ್ನು ಅಲಂಕರಿಸಿದರು. ಇವರು ವರ್ಷದ ದೋಹಾ ವಿಶ್ವಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಶಿವ ಮನೆಮನೆಯ ಮಾತಾಗಿದ್ದಾರೆ..! ಯುವಕರ ನೆಚ್ಚಿನ ಹೀರೋ ಆಗಿಬಿಟ್ಟಿದ್ದಾರೆ.ಇವರು ಇನ್ನೂ ಎತ್ತರಕ್ಕೆ ಬೆಳೆಯಲಿ.
6. ಚೆಸ್ :
ಅಭಿಜಿತ್ ಗುಪ್ತಾ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಚೆಸ್ ಚಾಂಪಿಯನಗಷಿಪ್ ವಿಜೇತರಾಗಿದ್ದಾರೆ.
7 ಕ್ರಿಕೆಟ್ :
ಜುಲೈನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ 5,000 ಏಕದಿನ ಕ್ರಿಕೆಟ್ನಲ್ಲಿ ರನ್ ಗಳ ಮೈಲುಗಲ್ಲು ತಲುಪಿದರು. ಮಹಿಳಾ ಕ್ರಿಕೆಟ್ನಲ್ಲಿ ಈ ಸಾಧನೆ ಗೈದ ಎರಡನೇ ಆಟಗಾರ್ತಿ ಇವರೇ..!
ಪುರುಷ ಕ್ರಿಕೆಟನ್ನು ಪೂಜಿಸುವ ಈ ದೇಶದಲ್ಲಿ ಮಹಿಳಾ ಕ್ರಿಕೆಟ್ಗೆ ಅಷ್ಟೊಂದು ಪ್ರಾಧನ್ಯತೆ ನೀಡ್ತಾ ಇಲ್ಲ. ಇಂಥಾ ಸ್ಥಿತಿಯಲ್ಲೂ ಭಾರತ ಮಹಿಳಾ ತಂಡ ಅಂತರಾಷ್ಟ್ರೀಯಾ ಕ್ರಿಕೆಟ್ ಮಂಡಳಿ ಪ್ರಕಟಿಸಿದ ನೂತನ ರ್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ..!
8. ಸೈಕ್ಲಿಂಗ್ :
ಭಾರತ ಸೈಕ್ಲಿಂಗ್ ನಲ್ಲೂ ಅಸಾಧಾರಣ ಪ್ರತಿಭೆಯನ್ನು ಪ್ರದಶರ್ಿಸಿದೆ. ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ” ಟ್ರಾಕ್ ಏಷಿಯಾ ಕಪ್”ನಲ್ಲಿ ಮೂರು ಚಿನ್ನ, ಮೂರು ಬೆಳ್ಳಿ. ಐದು ಕಂಚು ಸೇರಿದಂತೆ ಒಟ್ಟು ಹನ್ನೊಂದು ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭಾರತ ನಾವು ಎಂಥದ್ದನ್ನೇ ಸಾಧಿಸಲು ಸಿದ್ದ ಅನ್ನೋದನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ.
9. ಫುಟ್ಬಾಲ್ :
ಜೂನ್ನಲ್ಲಿ ಭಾರತ ಫುಟ್ಬಾಲ್ ರಾಷ್ಟ್ರೀಯ ತಂಡದ ನಾಯಕ ಸುನಿಲ್ ಚಟ್ರಿ ಅಂತರಾಷ್ಟ್ರೀಯಾಮಟ್ಟದಲ್ಲಿ 50 ಗೋಲ್ ದಾಖಲಿಸಿದ ಮೊದಲ ಭಾರತೀಯರೆಂಬ ಕೀರ್ತಿಗೆ ಭಾಜನರಾದರು.
10. ಜಿಮ್ನಾಸ್ಟಿಕ್ :
ಹಿರೊಶಿಮಾದಲ್ಲಿ ನಡೆದ ಆರನೇ ಸೀನಿಯರ್ ಎಆರ್ಟಿ ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ದೀಪ ಕರ್ಮಕರ್ ಕಂಚಿನ ಪದಕ ಗೆದ್ದರು.
11. ಹಾಕಿ :
ಏಪ್ರಿಲ್ ನಲ್ಲಿ ನಡೆದ 24ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿತಂಡ 4-1ರ ಅಂತರದಿಂದ ಕೋರಿಯಾವನ್ನು ಸೋಲಿಸುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡಿತು. 2015ರ ಒಳ್ಳೆಯ ಪ್ರದರ್ಶನದಿಂದಾಗಿ ಪುರುಷ ಮತ್ತು ಮಹಿಳಾ ತಂಡಗಳು 2016ರ ಆಗಸ್ಟ್ನಲ್ಲಿ ನಡೆಯಲಿರೋ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಮಹಿಳಾ ತಂಡ 36 ವರ್ಷದ ಈ ಐತಿಹಾಸಿಕ ಸಾಧನೆ ಮಾಡಿದೆ.
12. ಜಾವೆಲಿನ್ :
ಅಕ್ಟೋಬರ್ನಲ್ಲಿ ಐಪಿಸಿ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಜಾವೆಲಿನ್ ಥ್ರೋ ಎಫ್ 46ನಲ್ಲಿ ಭಾರತದ ಪ್ಯಾರಾ ಅಥ್ಲಿಟ್ ದೇವೇಂದ್ರ ಜೈಜಾರಿಯಾ ಬೆಳ್ಳಿ ಪದಕ ಗೆದ್ದರು.
13. ಶೂಟಿಂಗ್ :
ಕುವೈತ್ನಲ್ಲಿ ನವೆಂಬರ್ನಲ್ಲಿ ನಡೆದ ಏಷಿಯನ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 10ಮಿ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಹೀನಾ ಸಿಂಧು ಬಂಗಾರದ ಪದಕ ಗೆದ್ದರು. ಸೆಪ್ಟೆಂಬರ್ನಲ್ಲಿ ನಡೆದ ಏಷಿಯನ್ ಏರ್ಗನ್ ಚಾಂಪಿಯನ್ ಶಿಪ್ ನಲ್ಲೂ ಇವರು ಗೆಲುವಿನ ನಗೆ ಬೀರಿದ್ದರು. ಈಕೆ ಐ.ಎಸ್.ಎಸ್.ಎಫ್ ನಂಬರ್ 1 ರ್ಯಾಂಕ್ ಪಡೆದ ಭಾರತದ ಮೊದಲ ಶೂಟರ್..! ಇವರಿಗೆ ಅರ್ಜುನ ಪ್ರಶಸ್ತಿಯೂ ಲಭಿಸಿದೆ.
14. ಸ್ಕ್ವಾಷ್ :
ಆಗಸ್ಟ್ನಲ್ಲಿ ಕೊಡಗಿನ ಜೋಶ್ನಾ ಚಿನ್ನಪ್ಪ ತಮ್ಮ ವೃತ್ತಿ ಬದುಕಿನ 10 ನೇ ಸ್ಕ್ವಾಷ್ ಪ್ರಶಸ್ತಿಯನ್ನು ಗೆದ್ದರು. ಮೇಲ್ಬೋರ್ನ್ ನಲ್ಲಿ ನಡೆದ 15 ಸಾವಿರ ಡಾಲರ್ ಬಹುಮಾನದ “ವಿಕ್ಟೋರಿಯಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ಫೈನಲ್ನಲ್ಲಿ 3ನೇ ಶ್ರೇಯಾಂಕಿತ ಜೋಶ್ನಾ ಚಿನ್ನಪ್ಪ 11-5, 11-4, 11-9 ಅಂತರದಿಂದ ಡೆನ್ಮಾರ್ಕ್ ನ ದ್ವಿತೀಯ ಶ್ರೇಯಾಂಕದ ಆಟಗಾರ್ತಿ ಲಿನೆ ಹಾನ್ಸೆನ್ ಅವರನ್ನು ಸೋಲಿಸಿದರು.
15. ಈಜು :
ನಮ್ಮ ಈಜುಗಾರರು ಅಕ್ಟೋಬರ್ನಲ್ಲಿ ಥೈಲ್ಯಾಂಡಿನ ಬ್ಯಾಂಕಾಕ್ ನಲ್ಲಿ ನಡೆದ ಅಕ್ವಾಟಿಕ್ ಚಾಂಪಿಯನ್ ಶಿಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. 10-14ರ ವಯೋ ಮಿತಿಯ ಹುಡುಗರ 800ಮಿ ಫ್ರೀಸ್ಟೈಲ್ ನಲ್ಲಿ ಬೆಂದಂತ್ ಸಿಂಗ್, 15-17ರ ವಯೋಮಿತಿಯ ಹುಡುಗಿಯರ 50 ಮೀ ವಿಭಾಗದಲ್ಲಿ ಮಾನ ಪಾಟೀಲ್ ಚಿನ್ನದ ಪದಕವನ್ನೂ ಗೆದ್ದರು.
ಸೀನಿಯರ್ ಈಜುಗಾರರಾದ ವಿದ್ವಲ್ ಖಾಡೆ, ಸಾಜನ್ ಪ್ರಕಾಶ್ ಕೂಡ ವೈಯಕ್ತಿಕ 4*100ಮೀ ವಿಭಾಗದಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ 25 ದೇಶಗಳು ಭಾಗವಹಿಸಿದ ಈ ಸ್ಪರ್ಧೆ ಯಲ್ಲಿ ಭಾರತದ ಈಜುಗಾರರು 4 ಬೆಳ್ಳಿ,11 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
16. ಟೆನಿಸ್ :
ಭಾರತದ ಹೆಸರಾಂತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾರ್ಟಿನಾ ಹಿಂಗಿಸ್ ಜೊತೆ ವಿಂಬಲ್ಡನ್ ಮಹಿಳೆಯರ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದರು. ಈ ವರ್ಷ ಎರಡು ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಸ್ವಿಜರ್ ಲ್ಯಾಂಡಿನ ಮಾಟರ್ಿನಾ ಹಿಂಗಿಸ್ ಜೊತೆ ಅಗ್ರಶ್ರೇಯಾಂಕವನ್ನೂ ಪಡೆದಿದ್ದಾರೆ. ಇವರಿಗೆ ಆಗಸ್ಟ್ 29 2015ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯೂ ಲಭಿಸಿದೆ.
ಹೀಗೆ 2015ರಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸನ್ನು ಖಂಡಿದೆ. ಭಾರತ ಕ್ರಿಕೆಟ್ ನ ಡ್ಯಾಶಿಂಗ್ ಓಪನರ್ ಸೆಹ್ವಾಗ್, ವೇಗದ ಬೌಲರ್ ಜಹೀರ್ ಖಾನ್ ವೃತ್ತಿ ಬದುಕಿಗೆ ಈ ವರ್ಷ ವಿದಾಯ ಘೋಷಿಸಿದ್ದೂ ಕೂಡ ಇಲ್ಲಿ ನೆನಪು ಮಾಡಿಕೊಳ್ಳ ಬೇಕಾದ ಸಂಗತಿಯೇ. ಒಟ್ಟಾರೆಯಾಗಿ ಕ್ರೀಡಾ ಕ್ಷೇತ್ರದಲ್ಲಂತೂ ಭಾರತ ಹೊಸ ಹೊಸ ಸಾಧನೆಯನ್ನು ಮಾಡಿದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳ ಬಹುದು.
- ಶಶಿಧರ ಡಿ ಎಸ್ ದೋಣಿಹಕ್ಲು