ಭರತಪುರ (ರಾಜಸ್ಥಾನ): ವಿಶ್ವ ಕಂಡ ಮಹಾಮಾರಿ ಕೋವಿಡ್ 19 ಬಂದು ಚಿಕಿತ್ಸೆ ಪಡೆದರೆ 14 ದಿನದ ಚಿಕಿತ್ಸೆಯಲ್ಲಿ ಚೇತರಿಸಿಕೊಳ್ಳುತ್ತಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರ. ಆದರೆ ವೈದ್ಯಲೋಕಕ್ಕೆ ರಾಜಸ್ಥಾನದ ಮಹಿಳೆಯೊಬ್ಬರು ಸವಾಲಾಗಿ ಪರಿಣಮಿಸಿದ್ದಾರೆ.
ರಾಜಸ್ಥಾನದ ಭರತಪುರದ ನಿವಾಸಿ 30 ವರ್ಷದ ಶಾರದಾ ದೇವಿ ಕಳೆದ 5 ತಿಂಗಳಿನಿಂದ ಕೋವಿಡ್ 19 ಸೋಂಕಿನೊಂದಿಗೇ ಜೀವನ ನಡೆಸುತ್ತಿದ್ದಾರೆ. 2020ರ ಆಗಸ್ಟ್ 28ರಂದು ಈಕೆಯ ಪರೀಕ್ಷೆ ನಡೆಸಿದಾಗ ಮೊದಲ ಬಾರಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು.
ಇದಾದ ಬಳಿಕ 14 ಬಾರಿ ಆರ್‌ಟಿಪಿಸಿಆರ್ ಹಾಗೂ 17 ಆ್ಯಂಟಿಜೆನ್ ಟೆಸ್ಟ್ ಸೇರಿ ಒಟ್ಟು 31 ಮಾಡಿದ್ದು ಪರೀಕ್ಷೆಯ ಫಲಿತಾಂಶವೂ ‘ಪಾಸಿಟಿವ್’ ಬರುತ್ತಿದೆ. ಈಗಾಗಲೇ ಅವರಿಗೆ ಅಲೋಪತಿ, ಹೋಮಿಯೋಪತಿ ಹಾಗೂ ಆಯುರ್ವೇದಿಕ್ ಔಷಧಿ ನೀಡುತ್ತಿದ್ದು ಆದರೆ ಇವುಗಳು ಯಾವುದೇ ಪರಿಣಾಮ ಬೀರುತ್ತಿಲ್ಲ ಎನ್ನುವುದು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಅಚ್ಚರಿ ಮೂಡಿಸಿದೆ.
ಕೋವಿಡ್ ಪಾಸಿಟಿವ್ ಅಂತ ರಿಪೋರ್ಟ್ ಬರುತ್ತಿದ್ದರೂ ಶಾರದಾದೇವಿ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆಶ್ರಮದ ಎರಡು ಕೊಠಡಿಯಲ್ಲೇ ಕಾಲಕಳೆಯುತ್ತಿರುವ ಅವರು ತಾವೇ ಎಲ್ಲ ಕೆಲಸ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಇದೇ ಅವಧಿಯಲ್ಲಿ ಅವರ ತೂಕ 8 ಕೆಜಿ ಹೆಚ್ಚಾಗಿದೆ ಎನ್ನುವುದು ಕೂಡ ವಿಶೇಷ.
ಲೋ ಇಮ್ಯೂನಿಟಿಯೇ ಕಾರಣ!: ಪದೇ ಪದೇ ಪರೀಕ್ಷೆ ಮಾಡಿದರೂ ಪಾಸಿಟಿವ್ ಬರುತ್ತಿರುವುದಕ್ಕೆ ಅವರ ಲೋ ಇಮ್ಯೂನಿಟಿ ಅಂಶವೇ ಕಾರಣ ಇರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ಜೈಪುರದ ಸವಾಯಿ ಮಾನಸಿಂಗ್ ಆಸ್ಪತ್ರೆಯ ಮೈಕ್ರೋಬಯಾಲಜಿ ತಜ್ಞ ಡಾ. ಪ್ರದೀಪ್ ಕುಮಾರ್ ಹೇಳಿದ್ದಾರೆ.
5 ತಿಂಗಳಿಂದ ಐಸೋಲೇಷನ್!: ಕೋವಿಡ್ ಪಾಸಿಟಿವ್ ಅಗಿರುವ ಶಾರದಾದೇವಿ ಕಳೆದ 5 ತಿಂಗಳಿಂದ ಐಸೋಲೇಷನ್‍ನಲ್ಲಿದ್ದಾರೆ. ಇದಕ್ಕಾಗಿ ಆಶ್ರಮದಲ್ಲಿ ವಿಶೇಷ 2 ಕೊಠಡಿಯನ್ನು ಅವರಿಗೆ ನೀಡಲಾಗಿದೆ. ಶಾರದಾ ಅವರನ್ನು ಬಝೇರಾ ಗ್ರಾಮದಿಂದ ಇಲ್ಲಿಗೆ ಕರೆತರಲಾಗಿತ್ತು. ಈ ವೇಳೆ ಪರೀಕ್ಷೆ ಮಾಡಿದಾಗ ಆಕೆಗೆ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಇದು ಈ ಆಶ್ರಮದ ಮೊದಲ ಪಾಸಿಟಿವ್ ಪ್ರಕರಣವಾಗಿತ್ತು. ಕಳೆದ ವರ್ಷ ಆಗಸ್ಟ್ 28ರಂದು ಅವರಿಗೆ ಮೊದಲ ಟೆಸ್ಟ್ ಮಾಡಿದ್ದರು.
ಈ ಆಶ್ರಮದಲ್ಲಿ 4 ಜನರಿಗೆ ಪಾಸಿಟಿವ್ ಬಂದಿತ್ತು. ಆಗಸ್ಟ್ ಕೊನೆಯಲ್ಲಿ ಅವರನ್ನು ಭರತಪುರದ ಆರ್ಬಿಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಆಕೆಯ ಮಾನಸಿಕ ಹಾಗೂ ದೈಹಿಕ ಪರಿಸ್ಥಿತಿ ಸರಿಯಿಲ್ಲ. ಆಕೆಯ ಜೊತೆಗೆ ಯಾರಾದರೂ ಸಹಾಯಕ್ಕೆ ಇರಲೇಬೇಕು ಎಂದು ಹೇಳಿ ವಾಪಸ್ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗಾಗಿ ಆಶ್ರಮದಲ್ಲೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಇದೀಗ ಮತ್ತೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
————
ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ 7 ಕೋಟಿ ರೂ ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ
ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಸುಮಾರು 7 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ ಮಾಡಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಖೆಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಬಂದೂಕುಧಾರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
6 ಮಂದಿ ಬಂದೂಕುಧಾರಿಗಳು ಏಕಾಏಕಿ ಕಚೇರಿಗೆ ನುಗ್ಗಿ ಬ್ರಾಂಚ್ ಮ್ಯಾನೇಜರ್‌ಗೆ ಜೀವ ಬೆದರಿಕೆ ಒಡ್ಡಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಚೇರಿ ತೆರೆದ ಕೂಡಲೇ ಬಂದೂಕುಧಾರಿಗಳು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಕಚೇರಿಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ, ದುಷ್ಕರ್ಮಿಗಳ ಲೂಟಿಗೆ ಯಾವುದೇ ಅಡೆತಡೆ ಎದುರಾಗಿಲ್ಲ.
7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳ ಜೊತೆಯಲ್ಲೇ 96,000 ರೂ. ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಸಿನಿಮೀಯ ರೀತಿಯಲ್ಲಿ ಬಂದೂಕು ತೋರಿಸುತ್ತಾ ಒಳನುಗ್ಗಿದ ದುಷ್ಕರ್ಮಿಗಳು ಕಚೇರಿಯಲ್ಲಿದ್ದ ಸಿಬ್ಬಂದಿಗೆ ಬೆದರಿಸಿ ಕ್ಷಣಾರ್ಧದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಹೊರಟು ಹೋಗಿದ್ದಾರೆ. ಇದೀಗ ಪೊಲೀಸರು ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ನೀಡುವ ಮಾಹಿತಿ ಹಾಗೂ ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಬಂದೂಕುಧಾರಿ ದುಷ್ಕರ್ಮಿಗಳು ಮ್ಯಾನೇಜರ್‌ಗೆ ಹೆದರಿಸಿ ಲಾಕರ್ ಬಾಗಿಲು ತೆಗೆಸಿ, ಲಾಕರ್ ಒಳಗಿದ್ದ 20 ಸಾವಿರದ 96 ಗ್ರಾಂ ಚಿನ್ನವನ್ನು ಲೂಟಿ ಮಾಡಿರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳೆದ 2 ವಾರಗಳ ಹಿಂದಷ್ಟೇ ಮುತ್ತೂಟ್ ಫೈನಾನ್ಸ್‌ನ ಕೃಷ್ಣಗಿರಿ ಶಾಖೆಯಲ್ಲೂ ಕಳ್ಳತನ ಯತ್ನ ನಡೆದಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ಇದೀಗ ಲೂಟಿ ಪ್ರಕರಣ ವರದಿಯಾಗಿದೆ.
—-
ಖಾತೆ ಹಂಚಿಕೆ ಹಾಗೂ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವರ ಬಂಡಾಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ. ಇದೀಗ ಮತ್ತೆ ಖಾತೆ ಹಂಚಿಕೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ.
ಜೆ.ಸಿ ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಹಜ್ ಹಾಗೂ ವಕ್ಫ್ ಇಲಾಖೆಯನ್ನು ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ನೀಡಲಾಗಿದೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮೊದಲು ಮಾಧುಸ್ವಾಮಿಗೆ ನೀಡಲಾಗಿತ್ತು.
ಅಬಕಾರಿ ಖಾತೆ ನೀಡಿದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿದೆ. ಇನ್ನು ಕೆ. ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿದೆ. ಈ ಹಿಂದೆ ಅವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿತ್ತು.
ಇನ್ನು ಸಚಿವ ಆರ್ ಶಂಕರ್‌ಗೆ ಪೌರಾಡಳಿತದ ಬದಲಾಗಿ ತೋಟಗಾರಿಕೆಯನ್ನು ನೀಡಲಾಗಿದೆ. ಜೊತೆಗೆ ಕೆ.ಸಿ ನಾರಾಯಣ ಗೌಡ ಅವರಿಗೆ ಯುವ ಜನ ಹಾಗೂ ಕ್ರೀಡೆ ಜೊತೆಗೆ ಮುಖ್ಯಮಂತ್ರಿ ಬಳಿ ಇದ್ದ ಯೋಜನಾ ಇಲಾಖೆ ಖಾತೆಯನ್ನು ನೀಡಲಾಗಿದೆ.
ಕೆ. ಸುಧಾಕರ್‌ಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆಯನ್ನು ಬದಲಾವಣೆ ಮಾಡಬಾರದು ಎಂದು ಅವರು ಪಟ್ಟು ಹಿಡಿದಿದ್ದರು. ಆದರೆ ಅವರ ಒತ್ತಡಕ್ಕೆ ಸಿಎಂ ಮಣಿದಿಲ್ಲ. ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ಅವರಲ್ಲೇ ಮುಂದುವರಿಸಲಾಗಿದೆ.
ಜೆ.ಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ, ಹಜ್ ಹಾಗೂ ವಕ್ಫ್
ಅರವಿಂದ ಲಿಂಬಾವಳಿ- ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ
ಎಂಟಿಬಿ ನಾಗರಾಜ್ – ಪೌರಾಡಳಿತ ಹಾಗೂ ಸಕ್ಕರೆ
ಕೆ. ಗೋಪಾಲಯ್ಯ – ಅಬಕಾರಿ
ಆರ್ ಶಂಕರ್- ತೋಟಗಾರಿಕೆ
ಕೆ.ಸಿ ನಾರಾಯಣ ಗೌಡ – ಯುವ ಜನ ಹಾಗೂ ಕ್ರೀಡೆ, ಯೋಜನಾ ಇಲಾಖೆ
————
ಹೊಳೆನರಸೀಪುರ ತಾಲೂಕು ಮಾರಗೋಡನಹಳ್ಳಿಯಲ್ಲಿ ನಡೆದಿದ್ದ ಕೊಲೆ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಕೇವಲ 800 ರೂ. ಕಿತ್ತಾಟವಾಗಿ ನಾಗರಾಜ ಎಂಬಾತ ಮೂರ್ತಿಯನ್ನು ಕೊಲೆ ಮಾಡಿದ್ದ ಎನ್ನಲಾಗಿದೆ. ಜ.17ರಂದು ಜೂಜಾಟದ ವೇಳೆ ನಾಗರಾಜ 800 ರೂ. ಗೆದ್ದುಕೊಂಡು ಮನೆಗೆ ಹೊರಟಾಗ ತನ್ನಿಂದ ಹಣ ಹೊಡೆದುಕೊಂಡು ಹೋಗುತ್ತಿದ್ದೀಯಾ ಎಂದು ಜಗಳ ತೆಗೆದ ಮೂರ್ತಿ ಕಲ್ಲು ತೆಗೆದುಕೊಂಡು ನಾಗರಾಜನ ಮೇಲೆ ಎತ್ತಿಹಾಕಿದ್ದ.
ಇದರಿಂದ ಕೋಪಕೊಂಡ ನಾಗರಾಜ, ಮೂರ್ತಿಯ ಮುಖಕ್ಕೆ ಹೊಡೆದು, ಕಾಲಿನಿಂದ ಒದ್ದಾಗ ಕೆಳಕ್ಕೆ ಬಿದ್ದ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಶವವನ್ನು ಬೂರಿಕೆರೆಯ ಬಾವಿಗೆ ಶವ ಎಸೆಯಲಾಗಿತ್ತು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾರಗೌಡನಹಳ್ಲಿಯಲ್ಲಿ ಈ ಘಟನೆ ನಡೆದಿತ್ತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಹತ್ಯೆಯ ಬಳಿಕ ನಾಗರಾಜ್ ಗ್ರಾಮದಿಂದ ನಾಪತ್ತೆಯಾಗಿದ್ದ. ಹೀಗಾಗಿ ಕೊಲೆ ಮಾಡಿ ಊರು ಬಿಟ್ಟಿದ್ದವನನ್ನು, ಘಟನೆ ನಡೆದ ಮೂರನೇ ದಿನಕ್ಕೆ ಪೊಲೀಸರು ಬೆನ್ನಟ್ಟಿ ಬಂದಿಸಿದ್ದಾರೆ.
_—–
ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಸಂಭ್ರಮಾಚರಣೆ ಇಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಅಭಿಮಾನಿಗಳಿಂದ ನೆಡೆಯಿತು. ನಿಖಿಲ್ ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ ಅಭಿಮಾನಿಗಳು ಹುಟ್ಟು ಹಬ್ಬ ಹಿನ್ನೆಲೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು ಅಭಿಮಾನಿಗಳಿಗೆ ಊಟ ವ್ಯವಸ್ಥೆ ಮಾಡಿರೋ ನಿಖಿಲ್ ಸೈನ್ಯ ಸಮಿತಿ 100 ಕೆಜಿ ಕೇಕ್ ಕತ್ತರಿಸಿದ ಅಭಿಮಾನಿಗಳು ನಂತರ ನಗರದ ನಿವಾಸದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕೊರೊನಾ ವೈರಸ್ ಸಂಕಷ್ಟ ಕಾಲದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದುಕೊಂಡಿದ್ದೆ ಆದ್ರೆ, ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹುಟ್ಟು ಹಬ್ಬ ಆಚರಣೆಗೆ ಇಲ್ಲಿ ಬಂದಿದ್ದೀರಿನೀವೆಲ್ಲರೂ ಸುರಕ್ಷಿತವಾಗಿ ಮನೆ ತಲುಪಬೇಕು, ಆಗಲೇ ನನಗೆ ನೆಮ್ಮದಿ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಯುವಕರು ಬಂದಿದ್ದಾರೆ,
ಎಲ್ಲರಿಗೂ ಧನ್ಯವಾದಗಳು ಜೆಡಿಎಸ್ ಪಕ್ಷ ಅಂದ್ರೆ ರೈತರ ಪಕ್ಷ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಂದ್ರೆ ಯುವಕರ ಪಕ್ಷವೂ ಆಗುತ್ತದೆ ನಾವೆಲ್ಲಾ ಸಮಾಜದ ಏಳಿಗೆಗಾಗಿ ಜೊತೆಯಾಗಿ ದುಡೊಯೋಣ ಇಂದು ರೈಡರ್ ಚಿತ್ರದ ಟೀಸರ್ ಬಿಡುಗಡೆ ಯಾಗುತ್ತಿದೆ ಟೀಸರ್ ನೋಡಿ ಅಭಿಪ್ರಾಯ ತಿಳಿಸಿ ಎಂದು ಅಭಿಮಾನಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.