ಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಲ್ಲಿಯ ಜೀವನವನ್ನ ಪ್ರೀತಿಸುವ ಮಂದಿಗೆ ಬಹುತೇಕ ಈ ಪ್ಯಾಟೆ ಬದುಕು ಬೇಸರವಾಗತ್ತೆ. ಹಳ್ಳಿಗಳಲ್ಲಿ ಬಹುತೇಕ ಎಲ್ಲವೂ ನೈಸರ್ಗಿಕ ಮತ್ತು ಸಹಜ.. ಅಲ್ಲಿ ಗಾಳಿ, ಬೆಳಕು, ನೀರು ಬೆಂಕಿ ಎಲ್ಲವೂ ನಿಶ್ಕಲ್ಮಶ.. ಮಾನವ ಸಂಬಂಧಗಳಿಗೆ ಬೆಲೆ ಜಾಸ್ತಿ.. ಪ್ರಾಣಿ ಪಕ್ಷಿಗಳ ಬದುಕಿಗೆ ಆಯುಷ್ಯ ಜಾಸ್ತಿ.. ಕೇವಲ ಮನುಷ್ಯರು ಮಾತ್ರವಲ್ಲ ಸುತ್ತಮುತ್ತಲಿನ ಕ್ರಿಮಿಕೀಟಗಳು ಗಿಡಗಂಟೆಗಳಿಗೂ ಬಾಂಧವ್ಯ ಬೆಸೆದಿರುವ ಪರಿಸರ ಅದು.. ಅಲ್ಲಿ ಹಣದ ವಹಿವಾಟಿಗಿಂತ ಪ್ರೀತಿ ವಿಶ್ವಾಸದ ವಹಿವಾಟು ಹೆಚ್ಚೆಚ್ಚು.. ಪ್ರತಿಯೊಬ್ಬನು ಎಷ್ಟು ಪ್ರೀತಿ ವಿಶ್ವಾಸವನ್ನು ಬೇಕಾದರೂ ನಿರಂತರವಾಗಿ ಪ್ರತಿಫಲದ ಅಪೇಕ್ಷೆಯಿಲ್ಲದೆ ನೀಡಬಲ್ಲ..ಎಲ್ಲವೂ ಅಷ್ಟೇ ಸಹಜ ಪರಿಶುದ್ಧ.
ಸಿಟಿಯ ಮಂದಿಯನ್ನ ನೋಡಿದಾಗ ಇವರಿಗಿಂತ ಹಳ್ಳಿಯವರಿಗೆ ಅರೋಗ್ಯ ಭಾಗ್ಯವೂ ಹೆಚ್ಚು ಅನ್ನಿಸೊದು ಒಂದು ಅಭಿಪ್ರಾಯ..
ಹಳ್ಳಿಯಲ್ಲಿ ಗಿಡ ಗಂಟೆಗಳನ್ನ ನಂಬಿಯೇ ಸಾಕಷ್ಟು ಜನ ಬದುಕುತ್ತಿದ್ದಾರೆ. ತಾವೇ ಔಷಧಿಯನ್ನ ತಯಾರಿಸಿಕೊಂಡು ಅನೇಕ ರೋಗಗಳಿಗೆ ಮದ್ದಾಗಿ ಬದುಕುತ್ತಿದ್ದಾರೆ. ಬೇರೆಯವರನ್ನೂ ಬದುಕಿಸುತ್ತಿದ್ದಾರೆ. ಅಂತಹ ಹಲವರಲ್ಲಿ ಒಬ್ಬರ ಪರಿಚಯ.. ಅವರೇ ಮಹಾದೇವಿ.. ವಯಸ್ಸು ಸುಮಾರು ಐವತೈದು. ಇವರು ಒಂಥರಾ ಮಕ್ಕಳ ತಜ್ಞೆ.. ಚಿಕ್ಕ ಮಕ್ಕಳಿಗೆ ಏನೆ ಆದರೂ ಇವರೇ ಪರಿಹಾರ ಸುತ್ತಮುತ್ತಲ ಊರಲ್ಲಿ.. ಮಕ್ಕಳು ಹುಟ್ಟಿದಾಗ ತಾಯಿ ಮಗು ಇಬ್ಬರ ಸ್ನಾನ, ನಿದ್ದೆ, ಬಟ್ಟೆ ಒಗೆಯುವ ಕೆಲಸದಿಂದ ಆರಂಭವಾಗತ್ತೆ ಇವರ ಕಾಯಕ. ನೆಗಡಿ, ಜ್ವರ, ಕೆಮ್ಮು, ಅದರಾಚೆ ಕಾಡುವ ವೈದ್ಯಲೋಕಕ್ಕೆ ನಿಲುಕದ ಕಣ್ಣಿ, ಕಲ್ಕುಟುಕ, ಬಾಯ್ಬುಗುರಿ,ಹೀಗೆ ಹಲವು ಸಮಸ್ಯೆಗಳಿಗೆ ಬೆಟ್ಟದ ಗಿಡ ಬೇರುಗಳನ್ನ ಮದ್ದಾಗಿ ನೀಡ್ತಾರೆ. ಮಗು ಮೂರು ತಿಂಗಳು ಕಳೆಯುವ ತನಕ ಯಾವುದೇ ಭಯವಿಲ್ಲದೇ ದಿನ ಕಳೆಯುವಂತೆ ಮಾಡ್ತಾರೆ..ಮಕ್ಕಳ ಪೋಷಣೆಯ ಜೊತೆಗೆ ಹಳ್ಳಿಯಲ್ಲೇ ಹಲವು ಹೆರಿಗೆಯನ್ನು ಮಾಡಿಸಿದ್ದಾರೆ ಈಕೇ. ಅಷ್ಟೇ ಅಲ್ಲ ತನ್ನ ಒಂದು ಹೆರಿಗೆಯನ್ನು ಮನೆಯಲ್ಲಿ ತಾನೇ ಮಾಡಿಕೊಂಡ ಗಟ್ಟಿಗಿತ್ತಿ ಈಕೆ.
ಇಂದಿನ ವೈದ್ಯರು ಮನೆ ಮದ್ದಿಗೆ ಹೆಚ್ಚಾಗಿ ಬೆಲೆಕೊಡಲಾರರು.. ಅದು ತಪ್ಪು ಅನ್ನೋ ಅಭಿಪ್ರಾಯ ಕೂಡ ಅವರಲ್ಲಿ ಇದೆ.. ಆದ್ರೆ ಒಂದು ವರ್ಷದ ಹಿಂದೆ ನನ್ನ ಮಗು ಅನಾರೋಗ್ಯಕ್ಕೆ ಒಳಗಾದಾಗ ಡಾಕ್ಟರ್ ಕೊಟ್ಟ ಔಷಧವೂ ಕೆಲಸ ನಿರ್ವಹಿಸಿರಲಿಲ್ಲ. ಆಗ ಅದು ಕಣ್ಣಿ ಅಂತ ಕಂಡುಹಿಡಿದು ಮನೆ ಮದ್ದು ಮಾಡಿ ಚೇತರಿಸಿಕೊಳ್ಳುವಂತೆ ಮಾಡಿದ್ದು ಈ ಮಹಾದೇವಿ. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ನಮ್ಮ ತೋಟವನ್ನೇ ಮದ್ದಾಗಿ ಮಾಡಿಕೊಡ್ತಾಳೆ ಆಕೆ.
ಇನ್ನು ಕಾಲು ನೋವು , ಸಂಧಿ ನೋವು ಅಂದ್ರೆ ಇವರ ಕೈ ಮಸಾಜ್ ಒಂದೇ ಸಾಕು. ಅಷ್ಟು ಹಿತವಾಗಿ ಮಸಾಜ್ ಮಾಡುವ ಮೂಲಕ ನೋವನ್ನೆ ಮಾಯವಾಗಿಸ್ತಾರೆ.. ಸುತ್ತಮುತ್ತಲ ಹಳ್ಳಿಯವರು ಆಕೆಯನ್ನರಸಿ ಬಂದು ಕರೆದೊಯ್ದು ಮದ್ದು ಪಡೆದುಕೊಳ್ತಾರೆ..
ಹಳ್ಳಿಯಾಗಿರಲಿ ಪೇಟೆಯಾಗಿರಲಿ ಚಂದದ್ದನ್ನ ನೋಡಿದಾಗ ದೃಷ್ಟಿಯಾಗಿದೆ ಅನ್ನೋ ಮಾತು ಸಹಜ, ಜೊತೆಗೆ ನಂಬಿಕೆ ಕೂಡ ಇರೋದು ನಿಜ. ಇಂತಹ ದೃಷ್ಟಿ ತೆಗೆಯುವ ಕಾಯಕದಲ್ಲು ಈಕೆಯದ್ದು ಮೇಲುಗೈ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ದೃಷ್ಟಿ ತೆಗೆಯುವ ಕಾರ್ಯ ಆಕೆಗೊಲಿದ ವಿದ್ಯೆ. ಅದೇನು ಮೋಡಿಯೊ ಆಕೆ ದೃಷ್ಟಿ ತೆಗೆಯುತ್ತಿದ್ದಂತೆ ಮಕ್ಕಳು ಗೆಲುವಾಗಿ ಪುಟಿದೆದ್ದು ಕುಣಿಯುತ್ತಾರೆ.
ಊರಲ್ಲಿ ಯಾರ ಮನೆಯಲ್ಲಿ ಹಸು ಕರುಗಳಿಗೆ ಅನಾರೋಗ್ಯ ಕಾಲುಬಾಯಿ ರೋಗಗಳು, ಅಥವಾ ಇನ್ನೇನೋ ಆಗಿದ್ರು ಅವೆಲ್ಲದಕ್ಕೂ ಧಿಡೀರ್ ಔಷಧಿಯನ್ನ ಈ ಮಹಾದೇವಿ ನೀಡ್ತಾರೆ. ಮನುಷ್ಯರಿಗಾಗಲೀ ಪಶುಗಳಿಗಾಗಲಿ ಅನಾರೋಗ್ಯವಾದಾಗ ಕಾಡಿಗೆ ಹೋಗಿ, ಅಲೆದು ಮಾಡಿ ಬೇಕಾದ ಗಿಡವನ್ನೋ, ಬೇರನ್ನೋ ತಂದು ಅದನ್ನ ಜಜ್ಜಿ ಕಟ್ಟಿಯೋ ಕುಡಿಸಿಯೋ, ಉಜ್ಜಿಯೋ ಹೇಗೋ ಮದ್ದು ಮಾಡ್ತಾರೆ. ಹಾಗಂದ ಮಾತ್ರಕ್ಕೆ ಮಹಾದೇವಿ ಓದಿಲ್ಲ ಬರೆದಿಲ್ಲ. ಅಲೋಪತಿಯನ್ನೊ ಆಯುರ್ವೇದವನ್ನೊ ಬಲ್ಲವರಲ್ಲ. ಎಲ್ಲವನ್ನು ಈಕೆಯ ತಾಯಿ ದೊಡ್ಡಜ್ಜಿ ಬಳುವಳಿಯಾಗಿ ನೀಡಿದ್ದಾರೆ. ಇವರ ಹಲವಾರು ಔಷಧಿಗಳು ವೈದ್ಯಲೋಕಕ್ಕೆ ಸವಾಲೆಸೆಯುವಂತಹದ್ದು. ಕೇವಲ ಅನುಭವದ ಮೂಲಕ ಕಾಯಕವನ್ನ ನಡೆಸಿಕೊಂಡು ಹೋಗುವಂತವರು ಇವರು.
ಮಹಾದೇವಿ ಎಷ್ಟೆ ಮದ್ದು ಉಪಚಾರಗಳನ್ನು ಮಾಡಿದರೂ ಹಣವನ್ನ ಯಾರಿಂದ ಪಡೆದವರಲ್ಲ..ಏನು ಔಷದಿ ಮಾಡಿದರೂ ದೃಷ್ಟಿ ನಿವಾರಣೆ ಮಾಡಿದರೂ ಕೇವಲ ಒಂದು ತೆಂಗಿನ ಕಾಯಿ ಪಡೆದು ಋಣವನ್ನ ಬಿಡಿಸಿಕೊಳ್ತಾರೆ. ಇಂದಿನ ವೈದ್ಯರಂತೆ ಸಾವಿರಾರು ರೂಪಾಯಿ ದೋಚುವ ವಂಚನೆಯ ಮಾತು ಇವರ ಬಳಿಯಲ್ಲು ಸುಳಿಯಲಾರದು.
ಇದೆಲ್ಲವನ್ನ ಹೊರತು ಪಡಿಸಿದ್ರೆ ಮಹಾದೇವಿ ಕುಟುಂಬ ತುಂಬ ಬಡತನದಿಂದ ನರಳುತ್ತಿರೋ ಕುಟುಂಬ. ಬೆರೆಯವರ ತೋಟದಲ್ಲಿ ದಿನಗೂಲಿ ಮಾಡಿ ಬದುಕು ಸಾಗಿಸುತ್ತಿರುವಾಕೆ. ಗಂಡ ಕುಡಿತಕ್ಕೆ ದಾಸಯ್ಯ. ಇಬ್ಬರು ಹೆಣ್ಣುಮಕ್ಕಳನ್ನ ತಾನೇ ದುಡಿದು ಮದುವೆ ಮಾಡಿ ಕೊಟ್ಟಾಕೆ.. ಕುಡಿದು ಬಂದ ಗಂಡ ಹೊಡೆದು ಬಡಿದು ಮಾಡಿದಾಗಲೂ ಅದನ್ನ ಸಹಿಸಿಕೊಂಡೆ ಆತನನ್ನು ಸಲಹುತ್ತಿರುವಾಕೆ.. ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಮನೆಬಿಟ್ಟಿ ಹೋಗಿ ಹತ್ತಾರು ವರ್ಷ ಬಾರದಿದ್ದಾಗಲೂ ಮಗ ಬಂದೇ ಬರುತ್ತಾನೆಂದು ಹಗಲಿರುಳು ಕಾದವಳಾಕೆ..
ಜೀವನದಲ್ಲಿ ಬರೀ ಕಷ್ಟಗಳೇ ಆಕೆಯ ಬದುಕಲ್ಲಿ ಶಾಶ್ವತವಾಗಿದ್ದರೂ ಮುಖದಲ್ಲಿಯ ಮುಗುಳ್ನಗೆಯೆ ಉಳಿದವರಿಗೆ ಸ್ಪೂರ್ತಿ.. ಎಂದಿಗೂ ತಾನೊಂದು ಹೆಣ್ಣಾಗಿದ್ದರೂ ಗಂಡಿಗೆ ಮೀರಿ ದುಡಿದು ಬದುಕುತ್ತಿರುವಾಕೆ .ಇಂದಿಗೂ ಊರಿಗೆ ಹೋದಾಗ ಅತೀ ಹರ್ಷದಿಂದ ಬಂದು ಮಾತನಾಡಿಸಿ ಹರಸಿಹೋಗುವಾಕೆ.. ತನ್ನಲ್ಲಿರುವ ವಿದ್ಯೆಯನ್ನ ಬಳಸಿ ಎಷ್ಟೊಂದು ಹಣಮಾಡುವ ಅವಕಾಶವಿದ್ದರೂ ದೇವರು ಮೆಚ್ಚುವಂತಹ ಬದುಕನ್ನ ಆಕೆ ಬದುಕುತ್ತಿದ್ದಾಳೆಂದರೆ ಅದಕ್ಕೆ ಕಾರಣ ಹಳ್ಳಿ ಮತ್ತು ಅಲ್ಲಿಯ ಜೀವನ, ಹಾಗೇ ವೈವಿದ್ಯತೆ.. ಪ್ರತಿ ಹಳ್ಳಿಯಲ್ಲೂ ಇಂತಹ ಹಲವು ಮಹಾದೇವಿಯರು ಇದ್ದೆ ಇರುತ್ತಾರೆ.. ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.
- ಶ್ವೇತಾ ಭಟ್
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!