ಈ 23ರ ತರುಣಿ ಹಾಡ್ತಾಳೆ, ಡ್ಯಾನ್ಸ್ ಮಾಡ್ತಾಳೆ, ಸಿಕ್ಕಾಪಟ್ಟೆ ಮಾತಾಡ್ತಾಳೆ..! ಅಷ್ಟೇಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಒಳ್ಳೇ ಯೋಗಪಟು..! ಏನೋ ಒಂದಿಷ್ಟು ವಿಷ್ಯಾನ ಕರಗತ ಮಾಡ್ಕೊಂಡಿದ್ರೂ ನನಗೇನೂ ಗೊತ್ತೇ ಇಲ್ಲ ಅನ್ನೋ ಥರ ಇರೋ ಹುಡ್ಗಿ..! ಒಂದೇ ಮಾತಲ್ಲಿ, ನೇರವಾಗಿ ಹೇಳ್ಬೇಕಂದ್ರೆ ಅಹಂಕಾರವಿಲ್ದೇ ಇರೋ ಪ್ರತಿಭಾವಂತೆ..! ಸುದ್ದಿಯಾಗದ ಸಾಧಕಿ…!
ಇವತ್ತು ಏನಾದ್ರೂ ವಿದ್ಯಾಭ್ಯಾಸ ಪಡೆಯೋದ್, ತನ್ನ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಒಂದೊಳ್ಳೆ ಕೆಲ್ಸ ತಗೊಂಡು, ಸಂಬಳ ಎಣಿಸ್ಕೊಂಡು ಇದ್ ಬಿಡುವ ಎಂದು ಯೋಚ್ನೆ ಮಾಡೋ, ಯುವಕ-ಯುವತಿಯರೇ ಹೆಚ್ಚು..! ಇವರುಗಳ ನಡುವೆ ನಾನಿಲ್ಲಿ ನಿಮ್ಗೆ ಪರಿಚಯ ಮಾಡಿಕೊಡೋ ಹುಡ್ಗಿ ತುಂಬಾ ಡಿಫ್ರೆಂಟ್ ಅನಿಸ್ತಾಳೆ, ಎಲ್ಲೋ ಒಂದ್ ಕಡೆ ಗ್ರೇಟ್ ಅನಿಸ್ತಾಳೆ..!
ಅಂದಹಾಗೆ ಇವ್ಳ ಹೆಸ್ರು ನಾಗಶ್ರೀ ಟಿ.ಎಸ್ ಅಂತ. ಮಲೆನಾಡ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ಪುಟ್ಟ ಹಳ್ಳಿಯವ್ಳು..! ಇವಳು ಹುಟ್ಟಿ ಬೆಳೆದ ಆ ಹಳ್ಳಿ ಹೆಸ್ರು ತುಂಬಿನಕುಳಿ ಎಂದು. ಇವತ್ತಿಗೂ ಬಸ್‍ಸಂಪರ್ಕ ಇಲ್ದೇ ಇರೋ ಚಿಕ್ಕ ಹಳ್ಳಿಯದು..! ಅಲ್ಲಿನ ಮಕ್ಕಳು ಶಾಲೆಗೆ ಕಡಿಮೆ ಅಂದ್ರೂ ಮೂರ್ ಕಿಲೋಮೀಟರ್ ನೆಡ್ಕೊಂಡ್ ಬರ್ಬೇಕು. ಮಳೆಗಾಲದಲ್ಲಂತೂ ಆ ಕಷ್ಟ ಅನುಭವಿಸಿದವ್ರಿಗೇ ಗೊತ್ತು..! ಶಾಲೆಗೆ ಹೋಗಿ ಬಂದ್ರೆ ಸಾಕಾಗಿರುತ್ತೆ..! ಅಂತದ್ರಲ್ಲಿ ತಾಲೂಕು ಕೇಂದ್ರ ತೀರ್ಥಹಳ್ಳಿ ಕಡೆ ಹೋಗಿ ಸಂಗೀತ, ನೃತ್ಯ, ನಾಟಕ ಇತ್ಯಾದಿ ಇತ್ಯಾದಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ಕೊಡೋದ್ ಸ್ವಲ್ಪ ಕಷ್ಟವೇ..! ಆದ್ರೆ ಮನಸ್ಸು ಮಾಡಿದ್ರೆ ಯಾವುದೂ ಕಷ್ಟವಲ್ಲ..! ಏನ್ ಬೇಕಾದ್ರೂ ಕಲಿಯಬಹದು..ಅನ್ನೋದನ್ನ ನಾಗಶ್ರೀ ತೋರಿಸಿಕೊಟ್ಟಿದ್ದಾಳೆ..!
ಮಲೆನಾಡ ತುಂಬಿನಕುಳಿ ಎಂಬ ಗ್ರಾಮದಲ್ಲಿ ಸುಧೀಶ್ ಟಿ.ಎಸ್ ಮತ್ತು ಜಯಲಕ್ಷ್ಮೀ ದಂಪತಿ ಹಿರಿಯ ಮಗಳಾಗಿ ಹುಟ್ಟಿದವ್ಳು ನಾಗಶ್ರೀ. ಇವಳ ತಮ್ಮ ಪನ್ನಗ ಭೂಷಣ. ಚಿಕ್ಕಂದಿನಿಂದಲೇ ಪಠ್ಯೇತರ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಾಗಶ್ರೀಗೆ ಅಪ್ಪ –ಅಮ್ಮನ ಪ್ರೋತ್ಸಾಹ ಕೂಡ ಸಿಗ್ತು..! ತೀರ್ಥಹಳ್ಳಿ ಸೇವಾಭಾರತಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಶ್ರೀಧರ್ ಎಂಬ ಯೋಗ ಶಿಕ್ಷಕರ ಪರಿಚಯ ಆಗುತ್ತೆ..! ಶಾಲೇಲಿ ಮಾತ್ರವಲ್ಲ, ಶಾಲೆ ಬಿಟ್ಟ ಮೇಲು ಅವರು ಇವಳಿಗೆ ಯೋಗಕಲಿಸ್ತಾರೆ..!
“ನನ್ನತ್ರ ಒಂದೇ ಒಂದು ರೂಪಾಯಿ ಶುಲ್ಕ ತಗೊಳ್ದೆ ಯೋಗ ಹೇಳಿಕೊಟ್ರು..! ಹಾಗೆ ನಂಗೆ ಯೋಗ ಕಲಿಯೋಕು ಕೂಡ ಶ್ರೀಧರ್ ಸರ್ರೇ ಸ್ಪೂರ್ತಿ’’ ಅಂತಾಳೆ ನಾಗಶ್ರೀ. ಮೂರನೇ ತರಗತಿಯಲ್ಲಿ ಯೋಗ ಕಲಿಯುವುದನ್ನು ಆರಂಭಿಸಿದ ಇವ್ಳು ಅಂದಿನಿಂದಲೇ ನಾನಾ ವೇದಿಕೆಗಳಲ್ಲಿ ಯೋಗ ಪ್ರದರ್ಶನ ನೀಡಿ ಗಮನಸೆಳೆಯಲಾರಂಭಿಸಿದ್ಲು! ನನಗನಿಸಿದ ಮಟ್ಟಿಗೆ ಟೈಮಲ್ಲಿ ಯೋಗ ಬಗ್ಗೆ ಅಲ್ಲಿನ ಜನರಲ್ಲಿ ಅಷ್ಟೊಂದು ಆಸಕ್ತಿ ಇರ್ಲಿಲ್ಲ..! ತಂದೆ-ತಾಯಿ ಬೇರೆ ಬೇರೆ ವಿದ್ಯೆಗಳ ಕಲಿಕೆಗೆ ಮಕ್ಕಳಿಗೆ ಸಪೋರ್ಟ್ ಮಾಡ್ತಿದ್ರು, ಬಟ್ ಯೋಗಕ್ಕೆ ಭಾರಿ ಪ್ರೋತ್ಸಾಹವೇನೂ ಸಿಕ್ತಿರ್ಲಿಲ್ಲ..! ಆ ಸಮಯದಲ್ಲಿ ನಾಗಶ್ರೀ ಯೋಗ ಕಲಿಯುತ್ತಾಳೆ…!
ಇದೀಗ ಇಂಜಿನಿಯರಿಂಗ್ ಪದವೀಧರೆ ಆಗಿರುವ ನಾಗಶ್ರೀ ಯೂನಿಸಿಸ್ ಎಂಬ ಕಂಪನಿಯಲ್ಲಿ ಕೆಲ್ಸ ಮಾಡ್ತಾ ಇದ್ದಾಳೆ. ಆದರೆ, ಇವಳು ಇಂಜಿನಿಯರ್ ಆಗಿಯೇ ಮುಂದುವರೆಯಲು ಇಷ್ಟಪಡ್ತಿಲ್ಲ..! ಭಾರತೀಯ ಸಂಸ್ಕøತಿಯ ಅವಿಭಾಜ್ಯವೇ ಆಗಿರೋ ಯೋಗವನ್ನು ಎಲ್ಲೆಡೆ ಕೊಂಡೊಯ್ಯಬೇಕು ಅಂತ ಅಂದುಕೊಂಡಿದ್ದಾಳೆ. ಕಂಪನಿ ಕೆಲಸದ ಜೊತೆಗೆ ಯೋಗವನ್ನೂ ಕೂಡ ಹೇಳಿಕೊಡ್ತಿರೋ ಇವಳು, ಮುಂದಿನ ದಿನಗಳಲ್ಲಿ ಯೋಗಕ್ಕೆ ಫುಲ್‍ಟೈಮ್ ಮೀಸಲಿಡ್ತಾಳಂತೆ..! ಕೆಲ್ಸ -ಸಂಬಳ ಅಂತ ಯಾಂತ್ರಿಕ ಜೀವನದಲ್ಲಿ ಕಳೆದೋಗ್ತಾ ಇರೋರ ನಡುವೆ ನಾಗಶ್ರೀ ಹಾಗೂ ಇವಳಂತಹವರು ತುಂಬಾನೇ ವಿಭಿನ್ನವಾಗಿ ಕಾಣಿಸಿಕೊಳ್ತಾರೆ. ಒಳ್ಳೆಯ ಕೆಲ್ಸ ಬಿಟ್ಟು ಮುಂದೆ ಯೋಗ ಕಲಿಸುವುದರಲ್ಲೇ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ತೀನಿ ಅಂತ ಹೇಳ್ತಾ ಇರೋದಕ್ಕೇನೆ ನಾನಾಗ ನಾನಿಲ್ಲಿ ನಿಮಗೆ ಪರಿಚಯ ಮಾಡಿಕೊಡ್ತಾ ಇರೋ ಹುಡ್ಗಿ ತುಂಬಾ ಡಿಫ್ರೆಂಟು ಹಾಗೂ ಗ್ರೇಟ್ ಅನಿಸ್ತಾಳೆ ಅಂದಿದ್ದು.
ನಾಗಶ್ರೀ ಮಂಗಳೂರು ದಸರಾ ಚಾಂಪಿಯನ್ ಶಿಪ್, ದೊಡ್ಡಬಳ್ಳಾಪುರದ ಆರ್ ಎಲ್ ಜಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್‍ನಲ್ಲಿ 2013-14ರಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆ, ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಸ್ಪರ್ಧೆ, 2014-15ರಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆ, 2014ಹರಿಯಾಣದ ಕುರುಕ್ಷೇತ್ರ ಯೂನಿವರ್ಸಿಟಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆ ಸೇರಿದಂತೆ ನಾನಾ ಕಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ..!
ಯೋಗ ಕಲಿಯುತ್ತಾ.. ಕಲಿಸುತ್ತಾ, ಅದರಲ್ಲಿ ಸಾಧನೆ ಮಾಡುತ್ತಾ ಬೆಳೆಯುತ್ತಿರುವ ನಾಗಶ್ರೀ ಕೇವಲ ಯೋಗಪಟು ಮಾತ್ರವಲ್ಲ ಸಂಗೀತ ಕಲಿತಿದ್ದಾಳೆ.. ಒಳ್ಳೆಯ ಡ್ಯಾನ್ಸರ್ ಕೂಡ ಹೌದು.. ಕ್ಲೇ ಮಾಡೆಲ್ ಕೂಡ ಇವ್ಳಿಗೆ ಬರುತ್ತೆ..! ಹೀಗೆ ಸದ್ದು-ಸುದ್ದಿ ಇಲ್ಲದಂತೆ ಬೆಳೆಯುತ್ತೀರೋ ಮಲೆನಾಡ ಹಳ್ಳಿ ಹುಡ್ಗಿ ನಾಗಶ್ರೀ ಯುವಸುಮುದಾಯಕ್ಕೆ ಆದರ್ಶಳಾಗಿ ಇನ್ನೂ ಎತ್ತರೆತ್ತರಕ್ಕೆ ಬೆಳೀಲಿ. ನೀವು ಕೂಡ ಇವ್ಳಿಗೆ ಆಲ್ ದಿ ಬೆಸ್ಟ್ ಹೇಳಿ.
- ಶಶಿಧರ್ ಎಸ್ ದೋಣಿಹಕ್ಲು