ಎಲೆಕ್ಷನ್ ಹತ್ರ ಬಂದಾಗ ರಾಜಕಾರಣಿಗಳು, ಕಾರ್ಯಕರ್ತರು ಮಾತ್ರವಲ್ಲ.. ಮೀಡಿಯಾದವ್ರೂ ಸಿಕ್ಕಾಪಟ್ಟೆ ಬ್ಯುಸಿ ಆಗಿಬಿಡ್ತೀವಿ..! ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸ್ತಿದೆ..! ರಾಜಕೀಯ ಪಕ್ಷಗಳನ್ನು ಸಂಘಟನೆಯನ್ನು ಬಲಪಡಿಸೋ ಕಾರ್ಯದಲ್ಲಿ ಮಗ್ನವಾಗಿವೆ..!
ಅಂತೆಯೇ ಪತ್ರಕರ್ತರೂ ಕೂಡ ಬ್ಯುಸಿ ಆಗ್ತಿದ್ದಾರೆ. ಅದರಲ್ಲೂ ರಾಜಕೀಯದ ಬಗ್ಗೆ ಹೆಚ್ಚಾಗಿ ತಿಳ್ಕೊಂಡಿರೋರಿಗಂತೂ ಡಿಮ್ಯಾಂಡೋ ಡಿಮ್ಯಾಂಡು..! ರಾಜಕೀಯ ಸುದ್ದಿಗಳ ವಿಶ್ಲೇಷಣೆ, ರಾಜಕೀಯ ಬೆಳವಣಿಗೆಗಳು, ಅಂಕಿ-ಅಂಶಗಳ ವಿಕಿಪಿಡಿಯದಂತಿರೂ ಜರ್ನಲಿಸ್ಟ್ ಗಳಿಗಿನ್ನೂ ಪುರಸೊತ್ತೇ ಇರಲ್ಲ..!
ಅಂದಹಾಗೆ ಇಷ್ಟಲ್ಲಾ ಹೇಳೋಕೆ ಕಾರಣ, ಸ್ವಲ್ಪ ಸಮಯದಿಂದ ನಿಮ್ಮ ಟಿವಿ ಪರದೇಲಿ ಕಾಣಸಿಗದಿದ್ದ ಪತ್ರಕರ್ತ, ನ್ಯೂಸ್ ಆ್ಯಂಕರ್ ರಂಗನಾಥ್ ಭಾರಧ್ವಜ್ ಕಮ್‍ಬ್ಯಾಕ್ ಆಗಿರೋದು…!
ಯಸ್, ರಂಗನಾಥ್ ಭಾರಧ್ವಜ್ ಬಹುದಿನಗಳ ಬಳಿಕ ಮತ್ತೆ ತೆರೆಯಲ್ಲಿ ಘರ್ಜಿಸೋಕೆ ಬರ್ತಿದ್ದಾರೆ..! ಈ ಟಿವಿ ಕನ್ನಡವಾಹಿನಿ ಬಿಟ್ಟು ಹೊರಬಂದ್ಮೇಲೆ ರಂಗನಾಥ್ ಹೊಸ ಚಾನಲ್ ಮಾಡ್ತಾರೆ ಎಂಬ ಸುದ್ದಿ ಮಾಧ್ಯಮ ವಲಯದಲ್ಲಿ ಕೇಳಿಬಂದಿತ್ತು…! ಸಧ್ಯಕ್ಕೆ ರಂಗನಾಥ್ ಯಾವ ಹೊಸ ಸುದ್ದಿವಾಹಿನಿಯನ್ನು ಆರಂಭಿಸುತ್ತಿಲ್ಲ..! ಬದಲಾಗಿ ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯತ್ತ ಮತ್ತೆ ಟಿವಿ 9 ಕಡೆಗೆ ಮುಖಮಾಡಿದ್ದಾರೆ..!
ಹೌದು, ರಂಗನಾಥ್ ಭಾರಧ್ವಜ್ ಮತ್ತೆ ಟಿವಿ9ಗೆ ಹೋಗಿದ್ದಾರೆ. ಶೀಘ್ರದಲ್ಲೇ ಟಿವಿ 9 ಪರದೆಯಲ್ಲಿ ಅವರನ್ನು ಕಾಣಬಹುದು..!
ಟಿವಿ9ನಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ..! ದೃಶ್ಯಮಾಧ್ಯಮ ಲೋಕದ ಭೀಷ್ಮರಂತಿರೋ, ತೆರೆಮರೆಯ ಹೀರೋಗಳಾದ ರವಿಕುಮಾರ್ ಮತ್ತು ಮಾರುತಿ ಅವರು ಟಿವಿ 9 ಸಂಸ್ಥೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಟಿವಿ 9 ಸುದ್ದಿವಾಹಿನಿ ಆರಂಭದಿಂದಲೂ ಜೊತೆಗಿದ್ದು, ಸಂಸ್ಥೆಯ ಯಶಸ್ಸಿಗೆ ಶ್ರಮಿಸಿದ್ದ ಇವರಿಬ್ಬರು ಸಂಸ್ಥೆಯನ್ನು ಬಿಟ್ಟು ಹೊರಬಂದ ಬ್ರೇಕಿಂಗ್ ನ್ಯೂಸ್ ಅನ್ನು ನೀವು ದಿ ನ್ಯೂ ಇಂಡಿಯನ್ ಟೈಮ್ಸ್‍ನಲ್ಲಿ ಓದಿದ್ರಿ..!
ಈ ಸುದ್ದಿ ಪ್ರಕಟವಾದ ಸ್ವಲ್ಪ ದಿನಗಳನ್ನೇ ಕನ್ನಡದ ಅರ್ನಾಬ್ ಖ್ಯಾತಿಯ ನ್ಯೂಸ್ ಆ್ಯಂಕರ್ ಚಂದನ್ ಶರ್ಮಾ ಬಿಟಿವಿಯನ್ನು ಬಿಟ್ಟು ಟಿವಿ9ಗೆ ಪ್ರವೇಶಿಸಿದ್ದು, ಶೀಘ್ರದಲ್ಲೇ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ರಂಗನಾಥ್ ಭಾರಧ್ವಜ್ ಕೂಡ ಟಿವಿ9ಗೆ ಮತ್ತೆ ಸೇರಿದ್ದಾರೆ. ಮೂಲತಃ ದಾವಣಗೆರೆಯವರಾದ ರಂಗನಾಥ್ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ಕೆಲಸ ನಿರ್ವಹಿಸಿದ್ದವರು. ಈ ಟಿವಿ ಕನ್ನಡ ವಾಹಿನಿ ಆರಂಭವಾದಾಗ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದ್ರು. ಈ ಚಾನಲ್‍ನಲ್ಲಿ ಕೆಲವು ಸಮಯ ನ್ಯೂಸ್ ಆ್ಯಂಕರ್ ಆಗಿ ಕೆಲಸ ನಿರ್ವಹಿಸಿದ ಇವರು ಟಿವಿ9 ಕನ್ನಡ ಸುದ್ದಿವಾಹಿನಿ ಆರಂಭವಾದಾಗ ಅತ್ತ ಪಯಣ ಬೆಳೆಸಿದ್ರು. ಕೆಲವು ವರ್ಷಗಳ ಕಾಲ ಟಿವಿ9ನಲ್ಲಿ ನ್ಯೂಸ್ ಆ್ಯಂಕರ್ ಆಗಿ ಸೇವೆ ಸಲ್ಲಿಸಿ, ನಂತರ ಸುವರ್ಣ ಟಿವಿ ಕಡೆಗೆ ಪಯಣ ಬೆಳೆಸಿದ್ರು. ಅದಾದ ಬಳಿಕ ಸಿನಿಮಾ ರಂಗಕ್ಕೆ ಪ್ರವೇಶಿಸೋ ಮನಸ್ಸು ಮಾಡಿದ್ರೂ ಯಶಸ್ಸು ಸಿಗಲಿಲ್ಲ. ಮತ್ತೆ ಟಿವಿ ಮಾಧ್ಯಮ ಲೋಕವೇ ಇವರನ್ನು ಸೆಳೆಯಿತು. ಸಮಯ ಸುದ್ದಿವಾಹಿನಿನ ಮುಖ್ಯಸಂಪಾದಕ ಹುದ್ದೆ ಇವರನ್ನು ಕೈ ಬೀಸಿ ಕರೆಯಿತು. ಈ ವಾಹಿನಿಯಲ್ಲೂ ಒಂದಿಷ್ಟು ವರ್ಷ ಸೇವೆ ಸಲ್ಲಿಸಿದ ಇವರು ತಾವು ನ್ಯೂಸ್ ಆ್ಯಂಕರ್ ಆಗಿ ಜರ್ನಿ ಆರಂಭಿಸಿದ್ದ ಈ ಟಿವಿ ಕನ್ನಡ ವಾಹಿನಿಯ ಪ್ರಧಾನ ಸಂಪಾದಕರಾದ್ರು. ನಂತರದಲ್ಲಿ ಬದಲಾದ ಸನ್ನಿವೇಶಗಳಲ್ಲಿ ಈ ಟಿವಿಗೆ ರಾಜೀನಾಮೆ ನೀಡಿ ಹೊರಬಂದ್ರು. ಈ ವೇಳೆ ಇವರು ಹೊಸ ಚಾನಲ್ ಓಪನ್ ಮಾಡ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ, ಇದೀಗ ಪುನಃ ಟಿವಿ9ಗೆ ಸೇರಿದ್ದಾರೆ. ಮೊದಲೇ ಹೇಳಿದಂತೆ ಎಲೆಕ್ಷನ್ ಹತ್ತಿರ ಆಗ್ತಿದೆ..! ಇನ್ನು ರಾಜಕಾರಣದ ಬಿಸಿಬಿಸಿ ಚರ್ಚೆಯಲ್ಲಿ, ಟಿವಿ9 ಪರದೆಯಲ್ಲಿ ರಂಗನಾಥ್ ಭಾರಧ್ವಜ್ ಅವರನ್ನು ಕಾಣಬಹುದು.
- ಶಶಿಧರ್ ಎಸ್ ದೋಣಿಹಕ್ಲು