ರೈತ + ಕಲಾವಿದ + ನಿರ್ದೇಶಕ + ವರದಿಗಾರ + ನಿರೂಪಕ = ಶೇಷಕೃಷ್ಣ…!

Date:

ಹುಟ್ಟಿದ್ದು ಪುಟ್ಟಹಳ್ಳಿಯ ರೈತ ಕುಟುಂಬದಲ್ಲಿ. ಓದಿದ್ದು ಕನ್ನಡ ಮಾಧ್ಯಮದಲ್ಲಿ. ಆಸಕ್ತಿ ಇದ್ದುದು ಯಕ್ಷಗಾನ, ಫೋಟೋಗ್ರಫಿಯಲ್ಲಿ…! ಇಷ್ಟಪಟ್ಟಿದ್ದು ಪತ್ರಿಕೋದ್ಯಮವನ್ನು…! ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಆರಂಭದಲ್ಲಿ ಕೈ ಬೀಸಿ ಕರೆದಿದ್ದು ಸಿನಿಮಾ ಎಂಬ ಬಣ್ಣದ ಲೋಕ..! ಅಗ್ನಿಪರೀಕ್ಷೆಗಳನ್ನು ಎದುರಿಸಿ ಗೆದ್ದಿದ್ದು ತನ್ನಿಷ್ಟದ ಪತ್ರಿಕೋದ್ಯಮದಲ್ಲಿ…!


ಇವರು ಕನ್ನಡ ಮಾಧ್ಯಮ ಲೋಕದಲ್ಲಿ ಚಿರಪರಿಚಿತರಾಗಿರುವ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಶಾಂತ ಸ್ವಭಾವದ ನಿರೂಪಕ ಶೇಷಕೃಷ್ಣ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನುಳಿಯಾಲುವಿನ ರೈತಕುಟುಂಬದಲ್ಲಿ ಹುಟ್ಟಿದವರು. ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಗಿರಿಜ.
1 ನೇ ತರಗತಿಯಿಂದ 10ನೇ ತರಗತಿವರೆಗೆ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು.  ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಪಡೆದರು. ಕಾಲೇಜು ದಿನಗಳಿಂದಲೂ ಫೋಟೋಗ್ರಫಿಯಲ್ಲಿ ಎಲ್ಲಿಲ್ಲದ ಆಸಕ್ತಿ ಇವರದ್ದು. ಅಷ್ಟೇಅಲ್ಲದೇ ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಯಕ್ಷಗಾನ ಕಲಾವಿದರೂ ಹೌದು…! ಜೊತೆಗೆ ಮದ್ದಾಳೆಯನ್ನೂ ನುಡಿಸಬಲ್ಲರು. ಬೆಂಗಳೂರಿಗೆ ಬಂದ ಬಳಿಕ, ಮಾಧ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟನಂತರವೂ ಯಕ್ಷಗಾನ ವೇಷ ಹಾಕಿದ್ದಾರೆ.


ಶಾಲಾ-ಕಾಲೇಜು ದಿನಗಳಲ್ಲಿ ಕುಟುಂಬದವರ ಜೊತೆ ರೈತಾಪಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾ, ಯಕ್ಷಗಾನ ಮತ್ತು ಫೋಟೋಗ್ರಫಿಯಲ್ಲೂ ತೊಡಗಿಸಿಕೊಂಡವರು. ಇವುಗಳ ಜೊತೆಗೆ ಟ್ರೆಕ್ಕಿಂಗ್ ಕೂಡ ಇವರ ಹವ್ಯಾಸ.  ಜರ್ನಲಿಸಿಂ ಕಡೆಗೆ ಒಲವಿತ್ತಾದರೂ ಪದವಿ ಶಿಕ್ಷಣ ಮುಗಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿಗೆ ಬಂದವರು ಪಾದಾರ್ಪಣೆ ಮಾಡಿದ್ದು ಕನ್ನಡ ಚಿತ್ರರಂಗಕ್ಕೆ…! ಸಿನಿಮಾ ನಿರ್ದೇಶಕನಾಗಬೇಕು ಎಂಬ ಕನಸೊಂದಿಗೆ ಬಣ್ಣದಲೋಕ್ಕೆ ಬಂದು ಎರಡು ಸಿನಿಮಾಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ರು.


ಹೀಗಿರುವಾಗ ಒಮ್ಮೆ ಬರೀ ಸಿನಿಮಾವನ್ನೇ ನಂಬಿಕೊಂಡಿದ್ರೆ ಆಗಲ್ಲ. ಪತ್ರಿಕೋದ್ಯಮದಲ್ಲಿ ಅವಕಾಶ ಸಿಕ್ಕರೆ ಹೋಗಬೇಕು ಎಂದು ಯೋಚಿಸ್ತಾ ಇದ್ರು. ಆ ವೇಳೆಯಲ್ಲಿ ಟಿವಿ9 ಕನ್ನಡ ಸುದ್ದಿವಾಹಿನಿ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಿತ್ತು. ಹೊಸಬರನ್ನು ತನ್ನ ಬಳಗಕ್ಕೆ ಸೇರಿಸಿಕೊಳ್ಳಲು ಇಂಟರ್ ವ್ಯೂ ನಡೆಸಿತು. ಈ ವಿಷಯವನ್ನು ತಿಳಿದ ಶೇಷಕೃಷ್ಣ ಟಿವಿ9 ನಡಿಸಿದ ಸಂದರ್ಶನ ಅಟೆಂಡ್ ಮಾಡಿದ್ರು, ಪಾಸ್ ಆಗಿ. ಟಿವಿ9 ಬಳಗದ ಸದಸ್ಯರಾದ್ರು.


ಟಿವಿ9ನಲ್ಲಿ ಆರಂಭದಲ್ಲಿ ಕ್ರೈಂ ರಿಪೋರ್ಟರ್ ಆಗಿದ್ದ ಇವರಿಗೆ ನಿರೂಪಕನಾಗಬೇಕೆಂಬ ಆಸೆ ಇರಲಿಲ್ಲ. ಒಂದು ದಿನ ಯಾರೋ ಸೀನಿಯರ್ ಜರ್ನಲಿಸ್ಟ್ ಒಬ್ಬರು, ಬೇರೆ ಟಿವಿಯ ನಿರೂಪಕರೊಬ್ಬನ್ನು ನೋಡಿ, ನೀನೂ ನಿರೂಪಕ ಆಗಬಹುದು ಎಂದು ವ್ಯಂಗ್ಯವಾಡಿದ್ರಂತೆ..! ಅದು ಶೇಷಕೃಷ್ಣ ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತೆ. ಆ ಕ್ಷಣದಲ್ಲೇ ಒಂದು ಚಾಲೆಂಜ್ ತಗೊಂಡ್ರು. ನಾನು ನಿರೂಪಕನೂ ಆಗ್ತೀನಿ, ಆಗಲೇ ಬೇಕು ಎಂಬ ಹಠಕ್ಕೆ ಬಿದ್ರು. ರಿಪೋರ್ಟರ್ ಆಗಿದ್ದ ಇವರು ಬೇಕಂತಲೇ ಹೆಚ್ಚು ಹೆಚ್ಚು ನೈಟ್ ಶಿಫ್ಟ್  ಗಳನ್ನು ಹಾಕಿಸಿಕೊಂಡ್ರು. ಬಿಡುವು ಸಿಕ್ಕಾಗಲೆಲ್ಲಾ ನಿರೂಪಣೆ ಪ್ರಾಕ್ಟಿಸ್ ಮಾಡಿದ್ರು. ಒಂದು ದಿನ ನಾನೂ ನಿರೂಪಣೆ ಮಾಡಬಲ್ಲೆ ಅನ್ನೋದು ಗೊತ್ತಾದಾಗ, ಸಂಬಂಧಪಟ್ಟವರಲ್ಲಿ ನನಗೂ ನಿರೂಪಣೆಗೆ ಅವಕಾಶ ಮಾಡಿಕೊಡ್ತೀರ ಅಂತ ಕೇಳಿಕೊಂಡ್ರು. ಸ್ಕ್ರೀನ್ ಟೆಸ್ಟ್ ನಡೆಯಿತು..! ಶೇಷಕೃಷ್ಣ  ಅಲ್ಲಿಯೂ ಪಾಸ್ ಆದ್ರು.


ಟಿವಿ9ನಲ್ಲಿನ ಒಟ್ಟು 6.5 ವರ್ಷ ಸೇವೆಸಲ್ಲಿಸಿದ ಇವರು ಆರಂಭದ 4.5 ವರ್ಷದಲ್ಲಿ ಕ್ರೈಂ ರಿಪೋರ್ಟರ್ ಆಗಿ, ನಂತರ 2 ವರ್ಷ ನಿರೂಪಕರು ಹಾಗೂ ರಿಪೋರ್ಟರ್ ಆಗಿಯೂ ಕಾರ್ಯನಿರ್ವಹಿಸಿ ಯಶಸ್ವಿಯಾದರು. ಈ ನಡುವೆ ಮೈಸೂರು ಮುಕ್ತವಿವಿಯಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದರು. ರಿರ್ಪೋಟಿಂಗ್‍ನಲ್ಲಿ ಫೀಲ್ಡ್‍ನಲ್ಲಿ ಕಲಿತಿದ್ದು, ಸುಲಲಿತ ನಿರೂಪಣೆಗೆ ಸಹಕಾರಿ ಆಯ್ತು. ಚರ್ಚೆ, ಸಂದರ್ಶನಗಳು ಸುಲಭವಾದವು. ಶೇಷಕೃಷ್ಣ ಅಷ್ಟೊತ್ತಿಗಾಗಲೇ ಸ್ಟಾರ್ ನಿರೂಪಕರಾಗಿ ಹೊರ ಹೊಮ್ಮಿದ್ದರು.


6.5 ವರ್ಷ ಟಿವಿ9 ಬಳಗದಲ್ಲಿದ್ದ ಶೇಷಕೃಷ್ಣ ಬಿಟಿವಿ ಬಳಗ ಸೇರಿದ್ರು. ಸೀನಿಯರ್ ಆ್ಯಂಕರ್ ಆಗಿ ಸೇರಿದ ಇವರು ರಿಪೋರ್ಟಿಂಗ್ ಬಿಟ್ಟು ಪೂರ್ಣಪ್ರಮಾಣದ ನಿರೂಪಕರಾದ್ರು. ನ್ಯೂಸ್ ರೀಡ್, ವಿಶೇಷ ಸಂದರ್ಶನ, ಯಾವುದೇ ವಿಷಯದ ಡಿಸ್ಕಷನ್ ಇರಲಿ ಶೇಷಕೃಷ್ಣ ಅಲ್ಲಿರುತ್ತಾರೆ. ಇವರ ನಿರೂಪಣೆ ಶೈಲಿಯೂ ಇವರ ಸ್ವಭಾವದಂತೆಯೇ ಶಾಂತವಾಗಿರುತ್ತೆ. ವಿಷಯ ಗಂಭೀರವಾಗಿರುತ್ತೆ, ಕೇಳುವ ಪ್ರಶ್ನೆಗಳು ಅರ್ಥಗರ್ಭಿತವಾಗಿರುತ್ತವೆ.

ಕಳೆದ 4 ವರ್ಷದಿಂದ ಬಿಟಿವಿಯಲ್ಲಿರುವ ಇವರು 2017ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದರು. ತನಗೆ ಆರಂಭದಲ್ಲಿ ಕೆಲಸ ಕೊಟ್ಟ ಟಿವಿ9 ಸಂಸ್ಥೆಯನ್ನು ಸ್ಮರಿಸುವ ಶೇಷಕೃಷ್ಣ, ಬಿಟಿವಿ ಸಂಸ್ಥೆ ಹಾಗೂ ಇದರ ಎಂ.ಡಿ ಕುಮಾರ್ ಅವರ ಪ್ರೋತ್ಸಾಹಕ್ಕೆ ನಾನು ಚಿರರುಣಿ ಅಂತಾರೆ. ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಶೇಷ ಕೃಷ್ಣ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಂತರ ಬಿಟಿವಿ ಕಚೇರಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಎಮ್ ಡಿ ಕುಮಾರ್ ಅವರು ಪ್ರಶಸ್ತಿಯನ್ನು ಹಸ್ತಾಂತರಿಸಿ ಗೌರವಿಸಿದ್ದರು.

10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ಇವರ ಮೇಲೆ ಯಾವುದೇ ಅಪವಾದಗಳಿಲ್ಲ, ಆರೋಪಗಳೂ ಸಹ ಇಲ್ಲ..! ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ ಎನ್ನುವುದು ಖಂಡಿತಾ ಅತಿಶಯೋಕ್ತಿಯಲ್ಲ.


ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯಿಂದ ಬಂದ ಶೇಷಕೃಷ್ಣ ಯುವಕರಿಗೆ ಸ್ಪೂರ್ತಿ. ಕನ್ನಡ ಮೀಡಿಯಂ ಅಂತ ಮೂಗು ಮುರಿಯುವವರು ಇವರಂತವರನ್ನು ನೋಡಿ ಕಲಿಯಬೇಕು. ಇಂಗ್ಲಿಷ್ ಇಂಗ್ಲಿಷ್ ಅಂತ ಜಪ ಮಾಡುವ, ಖಾಸಗಿ ಶಾಲೆಗಳಲ್ಲಿ ಕಲಿತರೆ ಮಾತ್ರ ಬುದ್ಧಿವಂತರಾಗೋದು ಎಂಬ ಭ್ರಮೆಯಲ್ಲಿರೋ ಪ್ರತಿಯೊಬ್ಬರಿಗೂ ಶೇಷಕೃಷ್ಣ ಅವರ ಯಶೋಗಾಥೆಯನ್ನು ಪರಿಚಯಿಸುವ ಜವಬ್ದಾರಿ ನಿಮ್ಮದು.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

 

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...