ಇವರು ನಡೆಸಿಕೊಡೋ ಕಾರ್ಯಕ್ರಮಗಳು, ಚರ್ಚೆಗಳಲ್ಲಿ ಅರಚಾಟ, ಕಿರುಚಾಟ ಇರಲ್ಲ..! ಚರ್ಚೆಯ ವಿಷಯಾಂತರ ಆಗಲು ಸಾಧ್ಯವೇ ಇಲ್ಲ..! ನಿರ್ಧಿಷ್ಟ ವಿಷಯದ ಚರ್ಚೆ ಮಾಡಲು ಬಂದ ಅತಿಥಿಗಳು ಅಥವಾ ತಜ್ಞರು ಅಪ್ಪಿತಪ್ಪಿ ಚರ್ಚೆಯ ಹಳಿತಪ್ಪಿಸಿದರೆ, ಕೂಡಲೇ ಅದನ್ನು ಮರಳಿ ಟ್ರಾಕ್‍ಗೆ ತರುತ್ತಾರೆ..! ಎಷ್ಟೇ ಆದ್ರು, ಇವರು ನಿರೂಪಕರಾಗುವ ಮುನ್ನ ಕನ್ನಡ ಮೇಷ್ಟ್ರು ಆಗಿದ್ದವರಲ್ಲವೇ..?
ಹೌದು, ನಿಮಗೆಲ್ಲಾ ಚಿರಪರಿಚಿತರಾಗಿರೋ ನಿರೂಪಕ ಅರವಿಂದ ಸೇತುರಾವ್ ನಿರೂಪಕರಾಗಿ ಮಾಧ್ಯಮ ಕ್ಷೇತ್ರಕ್ಕೆ ಬರುವುದಕ್ಕಿಂತ ಮೊದಲು ಕನ್ನಡ ಶಿಕ್ಷಕರಾಗಿದ್ದವರು. ಮೈಸೂರು ಜಿಲ್ಲೆಯ ಕೆಸ್ತೂರು ಎಂಬಲ್ಲಿ ಹುಟ್ಟಿದ ಅರವಿಂದ ಸೇತುರಾವ್ ಬೆಳೆದಿದ್ದೆಲ್ಲಾ ಅರಮನೆ ನಗರಿ ಮೈಸೂರಲ್ಲಿ. ಇವರ ತಂದೆ ಸೇತುರಾವ್, ತಾಯಿ ಗಾಯತ್ರಿ ದೇವಿ, ಪತ್ನಿ ರಶ್ಮಿ ಹಾಗೂ ಮಗ ಅದ್ವೈತ್.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿ ಶಿಕ್ಷಣದವರೆಗೂ ಓದಿದ್ದೆಲ್ಲಾ ಮೈಸೂರಲ್ಲೇ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಇವರು ಮೈಸೂರು ವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಎಂದೂ ಪತ್ರಿಕೋದ್ಯಮಕ್ಕೆ ಬರುವ ಕನಸನ್ನು ಸಹ ಕಂಡಿರಲಿಲ್ಲ.
ಸ್ನಾತಕೋತ್ತರ ಪದವಿ ಬಳಿಕ ಮೈಸೂರಿನ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಜಯಪ್ರಕಾಶ್ ಶೆಟ್ಟಿ, ಹಮೀದ್ ಪಾಳ್ಯ, ರಾಧಿಕ ಮೊದಲಾದ ನಿರೂಪಕರನ್ನು ಕಂಡು ನಾನೂ ಇವರಂತೆ ನಿರೂಪಕನಾಗಬೇಕು ಎಂಬ ಆಸೆ ಚಿಗರೊಡೆದಿತ್ತು. ಒಂದೊಳ್ಳೆ ಅವಕಾಶಕ್ಕಾಗಿ ಕಾದಿರುವಾಗ ‘ಈ ಟಿವಿ’ ನಿರೂಪಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿಸಲ್ಲಿಸಿದ್ದ ಸುಮಾರು 800 ಮಂದಿಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಅರವಿಂದ ಸೇತುರಾವ್ ಸೇರಿದಂತೆ ನಾಲ್ವರು ಮಾತ್ರ…!
ಈ ನಾಲ್ವರನ್ನು ತರಬೇತಿಗಾಗಿ ಹೈದರಾಬಾದ್‍ಗೆ ಕಳುಹಿಸಿಕೊಡಲಾಯಿತು. ಅಲ್ಲಿ ತಮಗೆ ಜಯಪ್ರಕಾಶ್ ಶೆಟ್ಟಿ, ರಂಗನಾಥ್ ಭಾರದ್ವಜ್, ಹಮೀದ್ ಪಾಳ್ಯ, ಗೌರೀಶ್ ಅಕ್ಕಿ, ರಾಧಿಕ ಅವರಂತಹ ಒಳ್ಳೆಯ ಗುರುಗಳು ಸಿಕ್ಕರು. ಅವರು ನಮ್ಮನ್ನು ಚೆನ್ನಾಗಿ ಟ್ರೈನಪ್ ಮಾಡಿದ್ರು ಎಂದು ನೆನಪು ಮಾಡಿಕೊಳ್ಳುತ್ತಾರೆ ಅರವಿಂದ ಸೇತುರಾವ್.
ತರಬೇತಿಗಾಗಿ ಹೈದರಾಬಾದ್‍ಗೆ ಹೋದ ನಾಲ್ವರಲ್ಲಿ ಆಯ್ಕೆಯಾಗಿದ್ದು ಮಾತ್ರ ಇಬ್ಬರೇ. ಅವರಲ್ಲಿ ಅರವಿಂದ ಸೇತುರಾವ್ ಸಹ ಒಬ್ಬರಾಗಿದ್ರು. ಹೀಗೆ ಕನ್ನಡ ಮೇಷ್ಟ್ರು 2005ರಲ್ಲಿ ಈಟಿವಿ ವಾಹಿನಿ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ್ರು.ನಂತರ ಕೆಎಸ್ಒಯುನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅಲ್ಲಿಂದ ಯಾವತ್ತೂ ಹಿಂತಿರಿಗೆ ನೋಡಲೇ ಇಲ್ಲ.
ಡಾ.ರಾಜ್‍ಕುಮಾರ್ ಅವರು ವಿಧಿವಶರಾದಾಗ ಸೀನಿಯರ್ ಆ್ಯಂಕರ್‍ಗಳ ಅನುಪಸ್ಥಿತಿಯಲ್ಲಿ ಸುದ್ದಿ ಮಾಡುವ ಹೊಣೆ ಜೂನಿಯರ್ ಆ್ಯಂಕರ್‍ಗಳದ್ದಾಗಿತ್ತು. ಈ ಒತ್ತಡವನ್ನು ನಿಭಾಯಿಸಿ ಸೈ ಎನಿಸಿಕೊಂಡ ನಿರೂಪಕರಲ್ಲಿ ಅರವಿಂದ ಕೂಡ ಒಬ್ಬರು..! 2008ರ ಅಸೆಂಬ್ಲಿ ಎಲೆಕ್ಷನ್‍ನ ಸುದ್ದಿ, ಅದಕ್ಕೆ ಸಂಬಂಧಿಸಿದ ಚರ್ಚೆ, ಕಾರ್ಯಕ್ರಮಗಳು ಈಟಿವಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಈ ಯಶಸ್ಸಿನಲ್ಲಿ ಅರವಿಂದ ಅವರ ಪಾತ್ರ ಸಹ ಮುಖ್ಯವಾಗಿತ್ತು.
ಇದೆಲ್ಲಕ್ಕಿಂತ ಪ್ರತಿವರ್ಷ ದಸರಾ ವೇಳೆಯಲ್ಲಿ ಹೈದರಾಬಾದ್‍ನಿಂದ ತನ್ನೂರು ಮೈಸೂರಿಗೆ ಬಂದು ಅಲ್ಲಿ ದಸರಾ ಕಾರ್ಯಕ್ರಮದ ನಿರೂಪಣೆ ಮಾಡಿರೋದು ಅರವಿಂದ್ ಅವರಿಗೆ ಮರೆಯಲಾಗದ ಕ್ಷಣ. 2005ರಿಂದ 2011ರವರೆಗೆ ಈ ಟಿವಿಯಲ್ಲಿ ಸೇವೆ ಸಲ್ಲಿಸಿದ ಅರವಿಂದ್ 2011ರಲ್ಲಿ ಸುವರ್ಣ ಚಾನಲ್ ಸೇರಿದರು. 2013ರ ವಿಧಾನ ಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆಯ ವೇಳೆ ಒಳ್ಳೆಯ ಕವರೇಜ್ ಮೂಲಕ ಗುರುತಿಸಿಕೊಂಡರು.
2014ರ ಲೋಕಸಭಾ ಚುನಾವಣೆ ಬಳಿಕ ಸುವರ್ಣ ನ್ಯೂಸ್ ಬಿಟ್ಟು ಸಮಯ ಸುದ್ದಿವಾಹಿನಿ ಸೇರಿದ್ರು. ಅಲ್ಲೊಂದಿಷ್ಟು ತಿಂಗಳು ಕೆಲಸ ಮಾಡಿ 2015ರಲ್ಲಿ ಪ್ರಜಾ ಟಿವಿ ಬಳಗದ ಸದಸ್ಯರಾದ್ರು. ನಂತರ 2016ರಿಂದ ಪಬ್ಲಿಕ್ ಟಿವಿ ಜೊತೆಗಿರೋ ಇವರಿಗೆ ಕ್ರಿಕೆಟ್, ಕ್ರೈಂ ಹಾಗೂ ಪೊಲಿಟಿಕಲ್ ಸ್ಟೋರಿಗಳ ಬಗ್ಗೆ ಆಸಕ್ತಿ, ಕುತೂಹಲ.
ಸುವರ್ಣ ಸೇರಿದಾಗ ಅಂದಿನ ಸಂಪಾದಕ ವಿಶ್ವೇಶ್ವರ ಭಟ್ ಅವರು ನೀಡಿದ ಪ್ರೋತ್ಸಾಹವನ್ನು, ಈಗ ಪಬ್ಲಿಕ್ ಟಿವಿಯಲ್ಲಿ ರಂಗನಾಥ್ ಅವರು ನೀಡುತ್ತಿರೋ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನವನ್ನು ಅರವಿಂದ್ ಸದಾ ಸ್ಮರಿಸುತ್ತಾರೆ. ಸುವರ್ಣ ವಾಹಿನಿಯಲ್ಲಿ ನಡೆಸಿಕೊಟ್ಟಿದ್ದ ಪದ್ಮಿನಿ ಕ್ಲೀನಿಕ್ ಇಂದಿಗೂ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಅನೇಕ ವೈದ್ಯಕೀಯ ಹಾಗೂ ವಿಜ್ಞಾನ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಜೊತೆಗೆ ಪೊಲಿಟಿಕಲ್ ಡಿಬೇಟ್ ನಲ್ಲಿ ಎತ್ತಿದ ಕೈ. 13 ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅರವಿಂದ ಸೇತುರಾವ್ 2009ರಲ್ಲಿ ವಿ ಟೆಲಿ ಅವಾರ್ಡ್‍ಗೆ ದಕ್ಷಿಣ ಭಾರತದಿಂದ ನಾಮಿನೇಟ್ ಆಗಿದ್ದರು. 2013ರಲ್ಲಿ ಮಾಧ್ಯಮ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಿಂದ ಅಭಿನವ ಕನ್ನಡಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರೋಟರಿ ವರ್ಷದ ಕನ್ನಡಿಗ, ಮೈಸೂರು ಪ್ರತಿಭೆ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
–ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್