ಅತ್ಯಂತ ಕಡಿಮೆ ಅವಧಿಯಲ್ಲಿ ಕನ್ನಡ ಮಾಧ್ಯಮ ಲೋಕದಲ್ಲಿ ಬಹುಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ನಿರೂಪಕಿ ಲಿಖಿತಶ್ರೀ.
ತನ್ನ ಕೆಲಸ ನಿರೂಪಣೆ…! ಸ್ಕ್ರಿಪ್ಟ್ ಬರೆಯೋದು, ಕಾಪಿ ಎಡಿಟ್ ಮಾಡೋದು, ನನ್ನ ಕೆಲಸ ಅಲ್ಲ ಅಂತ ಯೋಚಿಸುವ ಕೆಲವು ಯುವ ನಿರೂಪಕರು ಯುವ ನಿರೂಪಕಿ ಲಿಖಿತಶ್ರೀ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಹೌದು, ಲಿಖಿತಶ್ರೀ ಕೇವಲ ನಿರೂಪಣೆ ಮಾಡಿ ತನ್ನ ಕೆಲಸ ಆಯ್ತು ಅಂತ ಸುಮ್ಮನೆ ಕೂರುವವರಲ್ಲ. ಸಮಯ ಸಿಕ್ಕಾಗಲೆಲ್ಲಾ ಹೊಸ ಹೊಸ ಕಾನ್ಸೆಪ್ಟ್ ರೆಡಿ ಮಾಡ್ತಿರ್ತಾರೆ..! ಸ್ಕ್ರಿಪ್ಟ್ ಬರೀತಾರೆ..! ಹೆಚ್ಚು ಹೆಚ್ಚು ಓದಿನಿಂದ ಹೆಚ್ಚು ಹೆಚ್ಚು ವಿಷಯಗಳ ಬಗ್ಗೆ ತಿಳಿದುಕೊಳ್ತಿರ್ತಾರೆ. ಆನ್‍ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್‍ನಲ್ಲೂ ಕೆಲಸ ಮಾಡೋ ಇವರು ಯುವ ನಿರೂಪಕ/ಕಿಯರಿಗೆ ಸ್ಪೂರ್ತಿಯ ಚಿಲುಮೆ…!
ಇವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಲ್ಲೇ. ತಂದೆ ಶ್ರೀನಿವಾಸ್, ತಾಯಿ ಗಿರೀಜ, ತಂಗಿ ತೇಜಸ್ವಿನಿ. ವಿದ್ಯಾವರ್ಧಕ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದ ಲಿಖಿತಶ್ರೀ ಅರಬಿಂದೊ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬಿಕಾಂಗೆ ಸೇರಿದ್ರು. ಆಗಲೇ ಮಾಧ್ಯಮದಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು.
ಕಾಲೇಜು ದಿನಗಳಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಲಿಖಿತಶ್ರೀಯ ಪ್ರತಿಭೆಯನ್ನು ಗುರುತಿಸಿದ್ದು ಅವರ ಸ್ನೇಹಿತೆ ಅಪ್ಸರ. ಅಪ್ಸರ ಅವರು ಲಿಖಿತಶ್ರೀಯನ್ನು ಈ-ಟಿವಿಗೆ ಪರಿಚಯಿಸಿದ್ರು. ಬಿಕಾಂ ಅರ್ಧಕ್ಕೆ ಬಿಟ್ಟು ಹೈದರಾಬಾದ್‍ನ ರಾಮೋಜಿರಾವ್ ಫಿಲ್ಮ್ ಸಿಟಿಯತ್ತ ಪಯಣ ಬೆಳೆಸಿದ ಲಿಖಿತಶ್ರೀ ‘ಕಾಲ್ ಮಾಡಿ ಕೊಳ್ಳೆ ಹೊಡೆಯಿರಿ’ ಎಂಬ ಗೇಮ್ ಶೋ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಯಶಸ್ಸಿನ ಬಳಿಕ ಮಾಧ್ಯಮ ಲೋಕದಲ್ಲೇ ಮುಂದುವರೆಯಲು ನಿರ್ಧರಿಸಿದರು. ಗೇಮ್ ಶೋ ಮುಗಿದ ಮೇಲೆ ಬೆಂಗಳೂರಿಗೆ ವಾಪಾಸ್ಸಾದ ಇವರು ಶೇಷಾದ್ರಿ ಪುರಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿಗೆ ಸೇರಿದ್ರು. ಮೂರು ವರ್ಷದ ಪದವಿ ಅವಧಿಯಲ್ಲಿ ಈ-ಟಿವಿಯಲ್ಲಿ ಫ್ರೀಲ್ಯಾನ್ಸರ್ ಆಗಿ ಅನೇಕ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ರು.
ಅಂತಿಮ ವರ್ಷದ ಪದವಿ ರಿಸೆಲ್ಟ್ ಬರುವ ಮುನ್ನವೇ ಸಮಯ ಚಾನಲ್‍ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಇಷ್ಟುದಿನ ಮನರಂಜನಾ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದ ಲಿಖಿತಶ್ರೀ ಅವರಿಗೆ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡೋದು ಹೊಸದಾಗಿತ್ತು.
ಅಂದಿನ ಸಮಯ ಎಡಿಟರ್ ಇನ್ ಚೀಫ್ ಮಂಜುನಾಥ್ ಹಾಗೂ ಆ್ಯಂಕರ್ ಚೀಫ್ ತೇಜಸ್ ಅವರು ತುಂಬಾನೇ ಪ್ರೋತ್ಸಾಹ ನೀಡಿದ್ರು. ಪೊಲಿಟಿಕಲ್ ಡಿಸ್ಕಷನ್ ಅಂತಹ ಸೀರಿಯಸ್ ಶೋಗಳನ್ನು ಹುಡುಗರೇ ಮಾಡಬೇಕು ಅಥವಾ ಇಂಥಾ ಶೋಗಳನ್ನು ಮಾಡುವ ನಿರೂಪಕಿಯರಿಗೆ ಏಜ್ ಆಗಿರಬೇಕು..! ಎಂಬ ಅಲಿಖಿತ ಸಂಪ್ರದಾಯವನ್ನು ಅಳಿಸಿದ ಮಂಜುನಾಥ್ ಹಾಗೂ ತೇಜಸ್ ಅವರು ಲಿಖಿತಶ್ರೀ ಅವರನ್ನು ಸೀರಿಯಸ್ ಶೋಗಳ ನಿರೂಪಕಿಯಾಗಿ ಕೂರಿಸಿದ್ರು.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಪೊಲಟಿಕಲ್ ಡಿಸ್ಕಷನ್‍ನಲ್ಲಿ ತೆರೆಯ ಮೇಲೆ ಮಿಂಚಿದ ಲಿಖಿತಶ್ರೀ ತಾನು ಯಾರಿಗೇನು ಕಮ್ಮಿಯಿಲ್ಲ ಅಂತ ನಿರೂಪಿಸಿದ್ರು. ಬಳಿಕ ಕೆಲವು ತಿಂಗಳು ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿ ಪುನಃ ಸಮಯ ಬಳಗ ಸೇರಿದ್ರು. 2014ರ ಲೋಕಸಭಾ ಚುನಾವಣೆ ನಂತರ ಈಟಿವಿಗೆ ಹೋದ್ರು.
ಮೂರು ತಿಂಗಳು ಮಾತ್ರ ಹೈದರಾಬಾದ್‍ನಲ್ಲಿ ಕೆಲಸ ಆಮೇಲೆ ಬೆಂಗಳೂರಲ್ಲಿ ಕೆಲಸ ಎಂದು ಈ ಟಿವಿಗೆ ಹೋಗಿದ್ದರು. ಆದರೆ, ಈ ಟಿವಿ ಬೆಂಗಳೂರಲ್ಲಿ ಕಾರ್ಯಾರಂಭ ಮಾಡೋದು ಇನ್ನೂ ಒಂದು ವರ್ಷ ಆಗಬಹುದು ಎಂದು ತಿಳಿದಾಗ ಅನಿವಾರ್ಯವಾಗಿ ಆ ಸಂಸ್ಥೆಯನ್ನು ಬಿಟ್ಟು ಬೆಂಗಳೂರಿಗೆ ಮರಳಿದರು.
ನಂತರ ಪ್ರಜಾ ಟಿವಿಯಲ್ಲಿ ಅವಕಾಶ ಸಿಕ್ತು. ಪ್ರಜಾ ಟಿವಿಯ ಆರಂಭದಿಂದಲೂ ಜೊತೆಗಿದ್ದಾರೆ. ಹೊಸ ನಿರೂಪಕ/ಕಿಯರಿಗೆ ಲಿಖಿತ ತರಬೇತಿ ನೀಡಿದ್ದಾರೆ.
‘ಇಲ್ಲಿ ತನಗೆ ಆನಂದ್ ಸರ್ ತುಂಬಾ ಸಪೋರ್ಟ್ ಮಾಡಿದ್ರು. ಆನ್‍ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್‍ನಲ್ಲೂ ಕೆಲಸ ಮಾಡಬೇಕು ಎಂದು ಸ್ಕ್ರಿಪ್ಟ್ ಬರೆಸಿದ್ರು..! ನನಗೆ ಸ್ಕ್ರಿಪ್ಟ್ ಮಾಡಲು ಪ್ರೋತ್ಸಾಹ ನೀಡಿದ್ದೇ ಇವರು’ ಎನ್ನುತ್ತಾರೆ ಲಿಖಿತಶ್ರೀ.
ಸದ್ಯ 9 ತಿಂಗಳ ಪುಟ್ಟ ಕಂದಮ್ಮನ ಜೊತೆ ಕಾಲ ಕಳೆಯುತ್ತಿರುವ ಲಿಖಿತಶ್ರೀ ರಜೆಯಲ್ಲಿದ್ದಾರೆ. ಆದಷ್ಟು ಬೇಗ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ.
ಲಿಖಿತಶ್ರೀ ಅವರ ಬಗ್ಗೆ ಹೇಳುವಾಗ ಇವರ ಪತಿ ಗಿರೀಶ್ ಅವರ ಬಗ್ಗೆ ಹೇಳಲೇ ಬೇಕಾಗುತ್ತೆ. ಉದಯ, ಪಬ್ಲಿಕ್ ಟಿವಿ ಸೇರಿದಂತೆ ನಾನಾ ಟೆಲಿವಿಷನ್ ವಾಹಿನಿಗಳಲ್ಲಿ ಕೆಲಸ ಮಾಡಿರುವ ಗಿರೀಶ್ ಸದ್ಯ ಸ್ಟಾರ್ ಸುವರ್ಣದಲ್ಲಿದ್ದಾರೆ. ಪತ್ರಕರ್ತ ಗಿರೀಶ್ ತನ್ನ ಪತ್ನಿ ಲಿಖಿತಾ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದಾರೆ. ಗಿರೀಶ್ ಯಶಸ್ಸಿನ ಹಿಂದೆ ಲಿಖಿತ, ಲಿಖಿತ ಯಶಸ್ಸಿನ ಹಿಂದೆ ಗಿರೀಶ್ ಜೊತೆಗಿದ್ದಾರೆ.
`ನಮ್ಮದು ಜಾಯಿಂಟ್ ಫ್ಯಾಮಿಲಿ. ಕುಟುಂಬದ ಎಲ್ಲರೂ ಪ್ರೋತ್ಸಾಹ ನನಗಿದೆ’ ಎನ್ನುತ್ತಾರೆ ಲಿಖಿತಶ್ರೀ…
–ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ