ಟಿವಿ9 ಕನ್ನಡ ಸುದ್ದಿವಾಹಿನಿ ಲಾಂಚ್ ಆದಾಗ ‘ಫಸ್ಟ್ ನ್ಯೂಸ್’ ಓದಿದ್ದು ಇವರು…! ವರನಟ ಡಾ. ರಾಜ್‍ಕುಮಾರ್ ಅವರ ಸಂದರ್ಶನ ಮಾಡಬೇಕಿಂದಿದ್ದ ಕನಸು ನನಸಾಗದೇ ಇರೋದು ಇವರನ್ನು ಸದಾ ಕಾಡ್ತಿರೋ ಕೊರಗು…! ಸತತವಾಗಿ ಹತ್ತುಗಂಟೆಗೂ ಹೆಚ್ಚುಕಾಲ ಲೀಲಾಜಾಲವಾಗಿ ನಿರೂಪಣೆ ಮಾಡಬಲ್ಲ ಅಪರೂಪದ ನಿರೂಪಕರಿರುವರು.
ಇವರು ರಮಾಕಾಂತ್ ಆರ್ಯನ್, ಮೂಲತಃ ಕನಕಪುರದವರು. ಬೆಳೆದಿದ್ದು ಬೆಂಗಳೂರಲ್ಲಿ. ತಂದೆ ಸುಂದರರಾಜ್ , ತಾಯಿ ನಾಗರತ್ನ, ಪತ್ನಿ ಸೌಮ್ಯ, ಮಗ ಹಿಮಾಂಕ್ ಆರ್ ಆರ್ಯನ್. ಜಯನಗರದಲ್ಲಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎ (ಕನ್ನಡ ಮೇಜರ್) ಪದವಿ ಹಾಗೂ ಬೆಂಗಳೂರು ಯೂನಿರ್ವಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಐಎಎಸ್, ಕೆಎಎಎಸ್ ಮಾಡಬೇಕು ಎಂಬುದು ಇವರ ಕನಸಾಗಿತ್ತು. ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ತನ್ನ ಕೈಲಾದಮಟ್ಟಿಗೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ಹಂಬಲವಿತ್ತು. ಆದರೆ, ಈ ಆಸೆಗಳಾವುವು ಈಡೇರಲಿಲ್ಲ. ಮಾಧ್ಯಮಕ್ಕೆ ಬರಬೇಕು ಎನ್ನುವುದು ಪೂರ್ವನಿಶ್ಚಿತವಾಗಿತ್ತೇನೋ?
ಎರಡನೇ ತರಗತಿಯಲ್ಲಿರುವಾಗಲೇ ದಿನಪತ್ರಿಕೆಗಳನ್ನು ಓದುತ್ತಿದ್ದರಂತೆ. ಇವರ ತಂದೆ ನ್ಯೂಸ್ ಪೇಪರ್ ಓದಿಸಿ, ಓದಿಸಿಯೇ ಕನ್ನಡ ಓದು ಬರಹವನ್ನು ಕಲಿಸಿದ್ದು. ಚಿಕ್ಕಂದಿನಿಂದಲೇ ಇವರಿಗೆ ಗೊತ್ತೋ ಗೊತ್ತಿಲ್ಲದಂತೆ ಮಾಧ್ಯಮ ಕ್ಷೇತ್ರ ಸೆಳೆದಿತ್ತು. ಪದವಿ ಬಳಿಕ ಮುಂದೇನು..? ಎಂದು ಯೋಚಿಸುತ್ತಿರುವಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು. ಕೆಲವು ದಿನಗಳ ನಂತರ ಗೆಳೆಯರೊಬ್ಬರು ರಮಾಕಾಂತ್ ಅವರನ್ನು ಭೇಟಿ ಮಾಡಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶವಿದೆ. ನೀನು ಎಂಟ್ರೆನ್ಸ್ ಎಕ್ಸಾಮ್ ಬರಿ ಎಂದು ಸಲಹೆ ನೀಡಿದರು. ಸರಿ ಎಂದು ಪರೀಕ್ಷೆ ಬರೆದ ರಮಾಕಾಂತ್ ಅವರಿಗೆ ಸೀಟ್ ಸಿಕ್ಕಿತು. ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್ ಪ್ರವೇಶಿಸಿದ್ರು.
ಸ್ನಾತಕೋತ್ತರ ಪದವಿ ವೇಳೆ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಇಂಟರ್ನ್ಶಿಪ್ ಮುಗಿಸಿದ್ರು. ಈ ವೇಳೆ ವೆಂಕಟನಾರಯಣ್ ಅವ್ರು ಕನ್ನಡಪ್ರಭ ಸಂಪಾದಕರಾಗಿದ್ದರು. ಈಗಿನ ಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿದ್ದ ಎಚ್.ಆರ್ ರಂಗನಾಥ್ ಅವರು ಮುಖ್ಯವರದಿಗಾರರಾಗಿದ್ದರು. ಇವರಿಂದ ವರದಿಗಾರಿಕೆ, ಪತ್ರಿಕೋದ್ಯಮದ ಪಾಠ ಕಲಿತ ರಮಾಕಾಂತ್ ಅವರಿಗೆ ಸ್ನಾತಕೋತ್ತರ ಪದವಿ ಬಳಿಕ ಉಷಾಕಿರಣ ಮತ್ತು ಈ ಟಿವಿ ಎರಡಲ್ಲೂ ಉದ್ಯೋಗವಕಾಶ ಸಿಕ್ತು. ಈ ಟಿವಿಯಲ್ಲಿ ಕೆಲಸ ಮಾಡೋದಾದ್ರೆ ಹೈದರಾಬಾದ್‍ಗೆ ಹೋಗಬೇಕಿತ್ತು. ಆದ್ದರಿಂದ ಮನೆಯವರ ಮಾತಿನಂತೆ ಉಷಾಕಿರಣ ಪತ್ರಿಕೆ ಮೂಲಕ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ರು. ಅದು 2004ನೇ ಇಸವಿ.
ಉಷಾಕಿರಣದಲ್ಲಿ ರಾಘವೇಂದ್ರ ಗಣಪತಿ ಅವರ ಅಂಡರ್‍ನಲ್ಲಿ ಕ್ರೀಡಾವಿಭಾಗದಲ್ಲಿ ಕೆಲಸ ಮಾಡಿದ್ರು. ಇಂಟರ್ ನ್ಯಾಷನಲ್ ಕ್ರಿಕೆಟ್ ಪಂದ್ಯಾವಳಿಗಳು, ಹಾಕಿ, ಪುಟ್ಬಾಲ್, ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳ ವರದಿ ಮಾಡೋ ಅವಕಾಶ ರಮಾಕಾಂತ್ ಅವರದ್ದಾಯಿತು. ನಂತರ 2006ರಲ್ಲಿ ಟಿವಿ9 ಕಡೆ ಇವರ ಪಯಣ ಸಾಗಿತು. ಟಿವಿ9ನ 7ನೇ ಎಂಪ್ಲಾಯ್ ಇವರು…! ಆಗಿನ್ನೂ ಟಿವಿ9 ಲಾಂಚ್ ಆಗಿರಲಿಲ್ಲ. ವರನಟ ಡಾ. ರಾಜ್‍ಕುಮಾರ್ ಅವರನ್ನು ಸಂದರ್ಶನ ಮಾಡಬೇಕೆಂಬುದು ರಮಾಕಾಂತ್ ಅವರ ಆಸೆಯಾಗಿತ್ತು. ಆದರೆ, ಟಿವಿ9 ಲಾಂಚ್ ಆಗುವ ಮುನ್ನವೇ ಅಣ್ಣವ್ರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ವೃತ್ತಿ ಜೀವನದಲ್ಲಿ ಒಮ್ಮೆಯಾದ್ರು ಡಾ. ರಾಜ್ ಅವರ ಇಂಟರ್ ವ್ಯೂ ಮಾಡಬೇಕೆಂಬ ಆಸೆ ಈಡೇರಿಲ್ಲ ಎನ್ನುವುದು ಮರೆಯಲಾಗದ ನೋವು ಎಂದು ಮನದಾಳದ ಮಾತುಗಳನ್ನು ಭಾವುಕವಾಗಿ ಹೇಳುತ್ತಾರೆ ರಮಾಕಾಂತ್.
ಈ ಮೊದಲೇ ಹೇಳಿರುವಂತೆ ಟಿವಿ9 ಸುದ್ದಿವಾಹಿನಿ ಆರಂಭವಾದಾಗ ಮೊಟ್ಟ ಮೊದಲು ನ್ಯೂಸ್ ಓದಿದ್ದು ಇವರು ಹಾಗೂ ಸುಕನ್ಯಾರವರು. ಅಷ್ಟೇಅಲ್ಲ, ಟಿವಿ9ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಬೌಂಡರಿ ಲೈನ್’ನ ಮೊದಲ ನಿರೂಪಕರು ಸಹ ರಮಾಕಾಂತ್. ನ್ಯೂಸ್ ಕೆಫೆಯಲ್ಲೂ ಇವರಿರುತ್ತಿದ್ರು.ಇವರಿಗೆ ಬರವಣಿಗೆ ಅಂದ್ರೆ ಪ್ರಾಣ. ನಿರೂಪಕರಾಗಿ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಅದೆಷ್ಟೋ ಸ್ಪೆಷಲ್ ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ, ಸ್ಪೋಟ್ರ್ಸ್‍ವ ರಿಪೋರ್ಟಿಂಗ್ ಕೂಡ ಮಾಡಿದ್ದಾರೆ.
ನಂತರ 2008ರಲ್ಲಿ ಕಸ್ತೂರಿ ವಾಹಿನಿಗೆ ಚೀಫ್ ಆ್ಯಂಕರ್ ಆಗಿ ಹೋದ್ರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯ ಅಪ್ ಡೇಟ್ಸ್‍ಗಳನ್ನು ಎಲ್ಲಾ ಚಾನಲ್‍ಗಳಿಗಿಂತ ಮುಂಚಿತವಾಗಿ, ಚೆನ್ನಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾದ್ರು. ಪುನಃ 2010ರಲ್ಲಿ ಟಿವಿ9ನಿಂದ ಆಫರ್ ಬಂತು. ಮತ್ತೆ ಸುಮಾರು 1.5 ವರ್ಷ ಅಲ್ಲಿ ಕೆಲಸ ಮಾಡಿದ್ರು. ಅದಾದ ಬಳಿಕ ಜನಶ್ರೀ ಬಳಗ ಸೇರಿದ್ರು. ಅಲ್ಲಿಂದ ಈ ಟಿವಿ ಕಡೆಗೆ ಸಾಗಿತು ರಮಾಕಾಂತ್ ಅವರ ಪಯಣ. 2 ವರ್ಷ ಈ ಟಿವಿಯಲ್ಲಿ ಕೆಲಸ ಮಾಡಿದ್ರು. ಇವರು ಇಲ್ಲಿ ನಡೆಸಿಕೊಡ್ತಿದ್ದ ‘ಜಿದ್ದಾ ಜಿದ್ದಿ’ ಬಹು ಜನಪ್ರಿಯತೆಯನ್ನು ಪಡೆದ ಕಾರ್ಯಕ್ರಮ.
ಒಮ್ಮೆ ಇದ್ದಕ್ಕಿದ್ದಂತೆ ಕಸ್ತೂರಿಯ ಎಡಿಟರ್ ಇನ್ ಚೀಫ್ ಆಗಲು ಆಹ್ವಾನ ಬಂತು. ಹೊಸ ಸವಾಲು ಸ್ವೀಕರಿಸಿ ಕಸ್ತೂರಿ ಕುಟುಂಬ ಸೇರಿದ್ರು. ಇವರು ಕಸ್ತೂರಿ ಸಂಪಾದಕೀಯ ವಿಭಾಗದ ಚುಕ್ಕಾಣಿ ಹಿಡಿದ್ದಾಗ ತಮ್ಮ ಸಂಸ್ಥೆಯನ್ನು ಒಂದೊಳ್ಳೆ ಹಂತಕ್ಕೆ ಕೊಂಡೊಂಯ್ದಿದ್ದರು. ಅನೇಕ ಹೊಸಬರಿಗೆ ಬದುಕುಕಟ್ಟಿಕೊಳ್ಳಲು ನೆರವಾದ್ರು. ಇವರಿಂದ ಅವಕಾಶ ಪಡೆದ ಅದೆಷ್ಟೋ ಮಂದಿ ಇವತ್ತು ಬೇರೆ ಬೇರೆ ವಾಹಿನಿಗಳಲ್ಲಿ ಬ್ಯುಸಿ ಆಗಿದ್ದಾರೆ.
ಪುನಃ ಈ ಟಿವಿಯಿಂದ ಕರೆಬಂತು. 2016ರ ಡಿಸೆಂಬರ್ ನಲ್ಲಿ ಈ ಟಿವಿ ಗೆ ರೀ ಎಂಟ್ರಿಕೊಟ್ಟರು. ಕಳೆದ 1 ವರ್ಷದಿಂದ ಈ ಟಿವಿಯಲ್ಲಿ ಅಸೋಸಿಯೇಟ್ ಎಡಿಟರ್ ಇನ್ ಚೀಫ್ ಕಾರ್ಯನಿರ್ವಹಿಸ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಕ್ರಿಕೆಟಿಗರಾದ ಸಚಿನ್, ದ್ರಾವಿಡ್, ಗಂಗೂಲಿ, ಮಹೇಂದ್ರ ಸಿಂಗ್ ಧೋನಿ, ಬ್ರೈಟ್ಲಿ, ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಸೇರಿದಂತೆ ಅನೇಕರ ಸಂದರ್ಶನಗಳನ್ನು ರಮಾಕಾಂತ್ ಮಾಡಿದ್ದಾರೆ. ಲೆಕ್ಕವಿಲ್ಲದಷ್ಟು ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ. ರಾಜಕೀಯ ವಿದ್ಯಾಮಾನ, ಸಿನಿಮಾ, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದ ಯಾವುದೇ ವಿಷಯದ ಬಗ್ಗೆ ಕಾರ್ಯಕ್ರಮವನ್ನು ಸುಲಲಿತವಾಗಿ ನಡೆಸಿಕೊಡುತ್ತಾರೆ.
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ನ್ಯೂಸ್ ಚಾನಲ್‍ಗಳಲ್ಲಿ ದನಿ ಎತ್ತಿದ ಮೊದಲಿಗರು ರಮಾಕಾಂತ್ ಅವರು. ಈ ಟಿವಿ ನ್ಯೂಸ್‍ನಲ್ಲಿ ಈ ಬಗ್ಗೆ ವಾಯ್ಸ್ ರೈಸ್ ಮಾಡುತ್ತಿದ್ದಂತೆ ನ್ಯಾಷನಲ್ ಮೀಡಿಯಾಗಳು ಈ ಬಗ್ಗೆ ಮಾತಾಡಲಾರಂಭಿಸಿದವು. ನೀಟ್ ಎಕ್ಸಾಮ್ ಅನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಮೊದಲು ಮಾತಾಡಿದ್ದು ಕೂಡ ರಮಾಕಾಂತ್ ಅವರೇ. ಅಷ್ಟೇಅಲ್ಲದೆ ಎಷ್ಟೋ ನೊಂದವರ ಪರ ಮಾಧ್ಯಮದಲ್ಲಿ ಕುಳಿತು ಬ್ಯಾಟ್ ಬೀಸಿದ್ದಾರೆ. ನೊಂದವರ, ಶೋಷಿತರ ದನಿಯಾಗಿದ್ದಾರೆ. ಅವರಿಗೆ ನ್ಯಾಯಕೊಡಿಸಿದ್ದಾರೆ, ಸಾಂತ್ವಾನ ಹೇಳಿದ್ದಾರೆ.
ಶಾಲಾ ದಿನಗಳಲ್ಲಿ ಖೋಖೋ ಪ್ಲೇಯರ್ ಆಗಿದ್ರು, ಪ್ರೌಢಶಾಲೆ, ಕಾಲೇಜು, ಯೂನಿವರ್ಸಿಟಿಯಲ್ಲಿ ಕ್ರಿಕೆಟ್ ಆಟಗಾರನಾಗಿ ಮಿಂಚಿದ್ರು. ಒಳ್ಳೆಯ ಚೆಸ್ ಆಟಗಾರ ಕೂಡ ಹೌದು. ಟ್ರಾವೆಲಿಂಗ್, ರೀಡಿಂಗ್ ಇವರಿಗೆ ಅಚ್ಚುಮೆಚ್ಚು. ಕವನದ ಬರೆಯುವುದರಲ್ಲೂ ಎತ್ತಿದ ಕೈ. ಹೀಗೆ ರಮಾಕಾಂತ್ ಅವರ ಬಗ್ಗೆ ಹೇಳೋಕ್ಕಿರೋದು ಒಂದೇ ಎರಡೇ… ಆಡುಮುಟ್ಟದ ಸೊಪ್ಪಿಲ್ಲ ರಮಾಕಾಂತ್ ಅವರು ತಿಳಿಯದ ವಿಷಯಗಳಿಲ್ಲ ಎನ್ನೋದು ಉತ್ಪ್ರೇಕ್ಷೆ ಆಗಲಾರದು. ಗುರಿ ಇಟ್ಟುಕೊಂಡರೆ ಸಾಧಿಸುವುದು ಕಷ್ಟವಿಲ್ಲ. ವಿಚಲಿತರಾಗದೇ ಪ್ರೀತಿಯಿಂದ ಕೆಲಸ ಮಾಡಿದ್ರೆ ನಿಧಾನವಾದ್ರೂ ಖಂಡಿತಾ ಯಶಸ್ಸು ಸಿಗುತ್ತೆ ಎನ್ನುತ್ತಾರೆ ರಮಾಕಾಂತ್.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ
18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
19 ನವೆಂಬರ್ 2017 : ಅಪರ್ಣಾ
20 ನವೆಂಬರ್ 2017 : ಅಮರ್ ಪ್ರಸಾದ್
21 ನವೆಂಬರ್ 2017 : ಸೌಮ್ಯ ಮಳಲಿ
22 ನವೆಂಬರ್ 2017 : ಅರುಣ್ ಬಡಿಗೇರ್
23ನವೆಂಬರ್ 2017 : ರಾಘವ ಸೂರ್ಯ
24ನವೆಂಬರ್ 2017 : ಶ್ರೀಲಕ್ಷ್ಮಿ
25ನವೆಂಬರ್ 2017 : ಶಿಲ್ಪ ಕಿರಣ್
26ನವೆಂಬರ್ 2017 : ಸಮೀವುಲ್ಲಾ
27ನವೆಂಬರ್ 2017 : ರಮಾಕಾಂತ್ ಆರ್ಯನ್