ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಿ ಬೆಳೆದ ನಿರೂಪಕಿ ಇವರು. ಕುಟುಂಬದವರ ಪ್ರೋತ್ಸಾಹವಿಲ್ಲದೇ ತನ್ನ ಗುರಿಯನ್ನು ತಲುಪಿದ ಸಾಧಕಿ. ಅವತ್ತು ಅಪ್ಪ, ಅಮ್ಮ, ಅಣ್ಣಂದಿರು, ಸಂಬಂಧಿಕರು, ಅಷ್ಟೇ ಅಲ್ಲ ಸಮುದಾಯ ಬಾಂಧವರೂ ಕೂಡ ಇವರನ್ನು ವಿರೋಧಿಸಿದ್ದರು. ಆದರೆ, ಎಲ್ಲದಕ್ಕೂ ಈಗ ಕಾಲ ಉತ್ತರಿಸಿದೆ…! ಇವರ ಸಾಧನೆಯನ್ನು ಮೆಚ್ಚಿ ‘ನಮ್ಮ ಮಗಳು’ ಅಂತ ಜನ ಹೆಮ್ಮೆಪಡ್ತಿದ್ದಾರೆ…!
ಶಮೀರಾ ಬೆಳುವಾಯಿ, ಮುಸ್ಲಿಂ ಯುವತಿಯರ ಪಾಲಿಗಂತೂ ಸ್ಪೂರ್ತಿ. ಮನೆಯಲ್ಲಿ ವಿಧಿಸುವ ಸಂಪ್ರದಾಯ ಬಂಧಿಯಿಂದ ಹೊರಬರಲು ಎಷ್ಟೋ ಮುಸ್ಲಿಂ ಯುವತಿಯರು ಇವತ್ತು ಇವರನ್ನು ಉದಾಹರಣೆಯಾಗಿ ತೋರಿಸ್ತಾರೆ…! ನಾವೂ ಇವರಂತೆ ಆಗಬೇಕೆಂದು ಹೆಮ್ಮೆಪಡ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಬೆಳುವಾಯಿ ಶಮೀರಾ ಅವರ ಹುಟ್ಟೂರು. ತಂದೆ ಅಬ್ದುಲ್ ಖಾದರ್, ತಾಯಿ ಅವಮ್ಮ. 7 ಮಂದಿ ಒಡಹುಟ್ಟಿದವರಲ್ಲಿ ಶಮೀರಾ ಕೊನೆಯವರು. ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಸಾಣೂರಲ್ಲಿ ಪ್ರೌಢ, ಪದವಿ ಪೂರ್ವ ಶಿಕ್ಷಣವನ್ನು, ಮೂಡಬಿದ್ರೆಯ ಆಳ್ವಾಸ್‍ನಲ್ಲಿ ಬಿಎ ಪದವಿ (ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲಿಷ್)ಯನ್ನು ಪಡೆದಿದ್ದಾರೆ. ಶಾಲಾ ದಿನಗಳಿಂದಲೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಇವರಿಗೆ ತುಂಬಾ ಆಸಕ್ತಿ. 3ನೇ ತರಗತಿಯಲ್ಲಿರುವಾಗಲೇ ಶಾಲಾ ಕಾರ್ಯಕ್ರಮಗಳಲ್ಲಿ ಭಾಷಣ ಮಾಡ್ತಿದ್ರು. ಭರತನಾಟ್ಯ, ಸಂಗೀತ ಅಂದ್ರೆ ಎಲ್ಲಿಲ್ಲದ ಇಷ್ಟ. ಆದ್ರೆ, ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಹಿನ್ನೆಲೆಯ ಇವರಿಗೆ ಅವುಗಳನ್ನು ಕಲಿಯಲು ಮನೆಯವರಿಂದ ವಿರೋಧವಿತ್ತು. ಈ ವಿರೋಧದ ನಡುವೆಯೂ ಕದ್ದುಮುಚ್ಚಿ ಅಲ್ಪ ಸ್ವಲ್ಪ ಕಲಿತಿದ್ದಾರೆ…!
8ನೇ ತಗರತಿ ಓದ್ತಿದ್ದ ಸಮಯವದು. ಅವತ್ತೊಂದು ದಿನ ಅನಿಲ್ ಕಪೂರ್ ಅಭಿನಯದ ‘ನಾಯಕ್’ ಸಿನಿಮಾವನ್ನು ನೋಡಿದ ಶಮೀರಾ ಅವರಲ್ಲಿ ಪತ್ರಕರ್ತೆಯಾಗೋ ಆಸೆ ಚಿಗುರೊಡೆಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿದ್ದ ಶಮೀರಾ ಅವರಿಗೆ ವಿಜ್ಞಾನ ವಿಷ್ಯದಲ್ಲಿ ಓದು ಮುಂದುವರೆಸುವಂತೆ ಕುಟುಂಬದವರು ಹೇಳಿದ್ರು. ಆದ್ರೆ ಇವರ ಆಸಕ್ತಿ ಕಲಾವಿಭಾಗವಾಗಿತ್ತು. ವಿಜ್ಞಾನ ಆಯ್ಕೆಮಾಡಿಕೊಂಡಿಲ್ಲ ಅಂತ ಕುಟುಂಬದವ್ರು ಕಾಲೇಜಿಗೆ ಅಡ್ಮಿಶನ್ ಮಾಡಿಸಲು ನಿರಾಕರಿಸಿದ್ರು. ಮನೆಯವರ ಒತ್ತಾಯಕ್ಕೆ ಮಣಿದು ಸೈನ್ಸ್ ಆಯ್ಕೆಮಾಡಿಕೊಳ್ಳಲು ರೆಡಿ ಇರದ ಶಮೀರಾ ಅವ್ರು ಒಬ್ಬರೇ ಕಾಲೇಜಿಗೆ ಹೋಗಿ ಅಡ್ಮಿಶನ್ ಆದ್ರು.
2015ರ ಮೇ-ಜೂನ್‍ನಲ್ಲಿ ಪದವಿ ಪರೀಕ್ಷೆ ಇದ್ದುದು. ಆದ್ರೆ, ಶಮೀರಾ ಫೆಬ್ರವರಿಯಲ್ಲೇ ಬೆಂಗಳೂರಿಗೆ ಹೋಗ್ತೀನಿ, ಕೆಲಸ ಮಾಡ್ತೀನಿ ಅಂತ ಮನೆಯಲ್ಲಿ ಹಠ ಮಾಡೋಕೆ ಶುರುಮಾಡಿದ್ರು. ಇವರನ್ನು ಮನೆಯಿಂದ ಹೊರ ಕಳುಹಿಸೋಕೆ ಯಾರಿಗೂ ಇಷ್ಟವಿರ್ಲಿಲ್ಲ.
ಮನೆಯಲ್ಲಿದ್ರೆ ಮದ್ವೆ ಮಾಡ್ತಾರೆ, ತನ್ನ ಗುರಿಮುಟ್ಟಲು ಸಾಧ್ಯವಾಗಲ್ಲ ಅಂತ ಎಕ್ಸಾಮ್ ಮುಗಿದ ಕೂಡಲೇ ಬೆಂಗಳೂರಿಗೆ ಹೊರಟರು. ‘ಈಕೆ ಮನೆಯಿಂದ ಹೊರಗೆ ಹೋದ್ರೆ, ಕೆಲಸಕ್ಕೆ ಕಳುಹಿಸಿದ್ರೆ ನಾನು ಮನೇಲಿ ಇರಲ್ಲ’ ಅಂತ ಒಬ್ಬ ಅಣ್ಣ ಹೇಳಿದ್ದರಂತೆ. ಅಷ್ಟೇಅಲ್ಲದೆ ಅವರು ಶಮೀರಾ ಜೊತೆ ಮಾತಾಡೋದನ್ನೇ ಬಿಟ್ಟಿದ್ದರಂತೆ. ಹಿರಿಯ ಅಣ್ಣ ಹನೀಫ್ ಪ್ರೋತ್ಸಾಹ ನೀಡಿ ಬೆಂಗಳೂರಿಗೆ ಕಳುಹಿಸಿದ್ದರು.
ಏನಾದರೂ ಸಾಧಿಸಲೇ ಬೇಕು ಎಂದು ಕುಟುಂಬದ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದ ಶಮೀರಾ ಮತ್ತವರ ಸ್ನೇಹಿತೆಯೊಬ್ಬರನ್ನು ‘ದಿ ಹಿಂದೂ’ ದಿನಪತ್ರಿಕೆಯ ಫೋಟೋ ಜರ್ನಲಿಸ್ಟ್ ಸುಧಾಕರ್ ಜೈನ್ ಮತ್ತು ಅವರ ಪತ್ನಿ ತಮ್ಮ ಮನೆಯಲ್ಲಿ ಉಳಿಸಿಕೊಳ್ತಾರೆ.
ಸುಧಾಕರ್ ಜೈನ್ ಅವರಿಗೆ ಸಮಯ ಚಾನಲ್ ನ ನಿರೂಪಕಿ ಶಿಲ್ಪ ಕಿರಣ್ ಅವರ ಪರಿಚಯವಿತ್ತು. ಶಿಲ್ಪ ಅವರಿಂದ ಸಮಯಕ್ಕೆ ನಿರೂಪಕರು ಬೇಕಾಗಿದ್ದಾರೆ ಅನ್ನೋದು ತಿಳಿಯಿತು. ಶಮೀರಾ ಸಮಯ ಕಚೇರಿಗೆ ಹೋದ್ರು, ಸ್ಕ್ರೀನ್ ಟೆಸ್ಟ್ ಕೊಟ್ಟು ಸೆಲೆಕ್ಟ್ ಆದ್ರು. ಅದು 2015 ಜೂನ್ 10 ಶಮೀರಾ ಅವರ ವೃತ್ತಿ ಜೀವನ ಆರಂಭವಾಯ್ತು.
ಶಿಲ್ಪ ಕಿರಣ್, ಜಯಪ್ರಕಾಶ್ ಶೆಟ್ಟಿ, ಅರವಿಂದ ಸೇತುರಾವ್, ಚನ್ನವೀರ ಸಗರನಾಳ್ ಮೊದಲಾದ ಅನುಭವಿ ಪತ್ರಕರ್ತರು, ನಿರೂಪಕರು ಆಗ ಸಮಯದಲ್ಲಿದ್ದರು. ಇವರುಗಳ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ಶಮೀರಾ ಅವರಿಗೆ ಸಿಕ್ತು. ಮೊದಲ ಬಾರಿ ಶಮೀರಾ ಆನ್ ಏರ್‍ನಲ್ಲಿ ಬಂದಾಗ, ಸಂಬಂಧಿಕರು ಮಾತ್ರವಲ್ಲದೇ, ಮುಸ್ಲಿಂ ಸಮುದಾಯದ ಯಾರ್ಯಾರೋ ಇವರ ಮನೆಗೆ ಫೋನ್ ಮಾಡಿ, ‘ನಿಮ್ಮ ಮಗಳನ್ನೇಕೆ ಚಾನಲ್ ಲಿ ಕೆಲಸ ಮಾಡೋಕೆ ಕಳುಹಿಸಿದ್ದೀರಿ. ಬುರುಕಾ ಇಲ್ಲದೇ ಹಾಗೆ ಎಲ್ಲರೆದುರು ಬರೋದು ಸರಿಯಲ್ಲ ಅಂತೆಲ್ಲಾ ಟೀಕೆ ಮಾಡಿದ್ರಂತೆ. ಅಷ್ಟೇ ಅಲ್ಲದೆ ಅನೇಕ ಅಪರಿಚಿತರು ಶಮೀರಾ ಅವರಿಗೆ ಮೆಸೆಂಜರ್ ಮೂಲಕ ಮೆಸೇಜ್ ಕಳುಹಿಸಿ ಕೆಲಸ ಬಿಡುವಂತೆ ಒತ್ತಡ ಹೇರಿ, ನಿರೂಪಣೆ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ರಂತೆ…!
ಆದ್ರೆ, ಆಗ ಅಪ್ಪ-ಅಮ್ಮ ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ. ಮಗಳು ಸರಿದಾರಿಯಲ್ಲೇ ನಡೀತಿದ್ದಾಳೆ ಅಂತ ಸುಮ್ಮನಾಗಿಬಿಟ್ಟರು…! ದಿನ ಕಳೆದಂತೆ ಊರಿನಲ್ಲಿ ‘ನಿಮ್ಮ ಮಗಳನ್ನು, ತಂಗಿಯನ್ನು ಟಿವಿಯಲ್ಲಿ ನೋಡಿದ್ವಿ, ಚೆನ್ನಾಗಿ ನ್ಯೂಸ್ ಓದ್ತಾಳೆ’ ಎಂದು ಜನ ಹೇಳಲಾರಂಭಿಸಿದಾಗ ಇಡೀ ಕುಟುಂಬವೇ ಹೆಮ್ಮೆಪಟ್ಟಿತು. 6 ತಿಂಗಳು ಮಾತಾಡೋದನ್ನು ನಿಲ್ಲಿಸಿದ್ದ ಅಣ್ಣ ಕೂಡ ತಂಗಿಯನ್ನು ಮೆಚ್ಚಿ ಮಾತಾಡಿದ್ರು.
ಸಮಯದಲ್ಲಿ ಕೆಲಸಕ್ಕೆ ಸೇರಿ 9 ತಿಂಗಳ ಬಳಿಕ ಸಮೀರಾ ಅವರಿಗೆ ಈ-ಟಿವಿಯಿಂದ ಆಫರ್ ಬಂತು. ಬೇರೆಲ್ಲರಿಗಿಂತಲೂ ತುಂಬಾ ಚಿಕ್ಕವರಾಗಿದ್ದ ಶಮೀರಾ ಸಮಯದ ಮನೆಮಗಳಂತಿದ್ದರು. ಆದ್ದರಿಂದ ಸಮಯ ಬಿಡಲು ಮನಸ್ಸಿರಲಿಲ್ಲ. ಒಳ್ಳೆಯ ಅವಕಾಶ ಸಿಕ್ಕಾಗ ಬಿಡಬಾರದು. ನಿಂಗೊಳ್ಳೆ ಭವಿಷ್ಯವಿದೆ ಹೋಗು ಅಂತ ಹೇಳಿ ಕಳುಹಿಸಿಕೊಟ್ರು ಕೆಲವು ಸಹೋದ್ಯೋಗಿಗಳು.
2016 ಮಾರ್ಚ್ 7ರಂದು ಈ-ಟಿವಿ ಕುಟುಂಬ ಸೇರಿದ್ರು ಶಮೀರಾ. ಆಗ ಈ ಟಿವಿಯಲ್ಲಿದ್ದ ರಂಗನಾಥ್ ಭಾರಧ್ವಜ್ ಅವರು ಸೇರಿದಂತೆ ಹಿರಿಯ ಪತ್ರಕರ್ತರ ಪ್ರೋತ್ಸಾಹ, ಮಾರ್ಗದರ್ಶನ ಸಿಕ್ತು. ಈ-ಟಿವಿಯಲ್ಲಿ ಯಾರೂ ಜೂನಿಯರ್ ಅಂತ ಟ್ರೀಟ್ ಮಾಡ್ದೆ ಒಳ್ಳೆಯ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸ್ತಿದ್ದಾರೆ ಎನ್ನುತ್ತಾರೆ ಶಮೀರಾ. ಈಗ ಕನ್ನಡದ ಚಿರಪರಿಚಿತ ನಿರೂಪಕಿಯರ ಸಾಲಿನಲ್ಲಿ ಶಮೀರಾ ಕೂಡ ಒಬ್ಬರಾಗಿದ್ದಾರೆ. ಶಿವಮೊಗ್ಗದ ಮೆಗಾನ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸುದ್ದಿಯಾಗಿದ್ದು ನಿಮಗೆ ನೆನಪಿರಬಹುದು. ಆ ವೇಳೆ ಶಾಸಕ ಪ್ರಸನ್ನ ಕುಮಾರ್ ಅವರನ್ನು ಶಮೀರಾ ತರಾಟೆ’ ತೆಗೆದುಕೊಂಡಿದ್ದ ಪರಿಗೆ ಎಲ್ಲರೂ ಶಹಬ್ಬಾಸ್ ಎಂದಿದ್ದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಮಳೆ ಅವಾಂತರ ಸೃಷ್ಠಿಸಿದ್ದಾಗ ಸತತ 3 ಗಂಟೆಗಳ ಕಾಲ ನಿರೂಪಣೆ ಮಾಡಿದ್ದರು. ಹಿಂದೆ ಸಮಯದಲ್ಲಿ ಇವರು ನಡೆಸಿಕೊಡ್ತಿದ್ದ ‘ಸಮಯ ಸವಾಲ್’ ಜನಪ್ರಿಯವಾಗಿತ್ತು.
ಶಾಲಾ-ಕಾಲೇಜು ದಿನಗಳಲ್ಲಿ ವಾಲಿಬಾಲ್, ಶಟಲ್ ಬ್ಯಾಟ್ಮಿಂಟನ್ ಆಡ್ತಿದ್ರು. ಆದ್ರೆ ಇದಕ್ಕೆ ಸಂಪ್ರದಾಯ ಇವರ ಕ್ರೀಡಾಸಕ್ತಿಗೆ ಅಡ್ಡಿಪಡಿಸಿತು. ಮುಂದೆ ಮೀಡಿಯಾಕ್ಕೆ ಬರುವಾಗಲು ಮನೆಯಲ್ಲಿ ವಿರೋಧವಾದಾಗ, ನನ್ನೆಲ್ಲಾ ಇಷ್ಟಗಳನ್ನು ನಿಮಗಾಗಿ, ಸಂಪ್ರದಾಯಕ್ಕಾಗಿ ತ್ಯಾಗ ಮಾಡಿದ್ದೀನಿ. ದಯವಿಟ್ಟು ಇದಕ್ಕೊಂದಕ್ಕೆ ಅವಕಾಶ ಮಾಡಿಕೊಡಿ ಅಂತ ಪರಿಪರಿ ಬೇಡಿಕೊಂಡು ಮಾಧ್ಯಮಕ್ಕೆ ಕಾಲಿಟ್ಟವರು ಶಮೀರಾ.
ನಾನು ಯಾವ ಸಿದ್ಧಾಂತ, ಪಕ್ಷಕ್ಕೂ ಜೋತುಬಿದ್ದಿಲ್ಲ. ಆದ್ದರಿಂದ ತಪ್ಪು ಮಾಡಿದವರನ್ನು ಮುಕ್ತವಾಗಿ ಪ್ರಶ್ನಿಸ್ತೀನಿ. ಒಳ್ಳೆಯ ಕೆಲಸ ಮಾಡಿದಾಗ ಖುಷಿ ಪಡ್ತೀನಿ ಎನ್ನುವ ಶಮೀರ, ‘ಪತ್ರಕರ್ತರು ಎಡ-ಬಲ ಎಂಬ ಸಿದ್ಧಾಂತವನ್ನು ಬಿಟ್ಟು ಮಾಧ್ಯಮ ಸಿದ್ಧಾಂತ ಅನುಯಾಯಿಗಳಾಗಬೇಕು’ ಎನ್ನುತ್ತಾರೆ.
ಬ್ಯಾರಿ ಇವರ ಮಾತೃಭಾಷೆಯಾದ್ರೂ ಎಲ್ಲರಿಗೂ ಇಷ್ಟವಾಗೋ ರೀತಿ ಕನ್ನಡ ಮಾತಾಡ್ತಾರೆ. ಭಾಷೆ ಮೇಲೆ ಹಿಡಿತವಿದೆ. ಎಲ್ಲರಿಂದಲೂ ಕಲಿಯುವುದನ್ನು ಬಯಸ್ತಾರೆ. ಮುಸ್ಲಿಂ ಸಮುದಾಯದ ಎಷ್ಟೋ ಮಹಿಳೆಯರು ಇವರಿಗೆ ಮೆಸೇಜ್ ಮಾಡಿ, ನೀವು ನಮಗೆ ಆದರ್ಶ, ಸ್ಪೂರ್ತಿ ಎಂದು ಮೆಸೇಜ್ ಮಾಡ್ತಾರೆ. ಮೀಡಿಯಾಕ್ಕೆ ಬರಲಿಚ್ಛಿಸಿರೋ ಮುಸ್ಲಿಂ ಯುವತಿಯರು ‘ನಿಮ್ಮ ಉದಾಹರಣೆ ನೀಡಿ ನಾವು ಮೀಡಿಯಾಕ್ಕೆ ಎಂಟ್ರಿಕೊಡ್ತೀವಿ ಮೇಡಂ’ ಅಂತ ಹೇಳ್ತಿದ್ದಾರೆ. ಸಾಧನೆ, ಪರಿವರ್ತನೆ ಅಂದ್ರೆ ಇದೆ ಅಲ್ವಾ..?
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)07ಡಿಸೆಂಬರ್ 2017 : ಶಮೀರಾ ಬೆಳುವಾಯಿ