ರವಿ ಬೆಳಗೆರೆಯೇನು ಗೌತಮ ಮುನಿಯೆ..? ಶಾಪ ಕೊಟ್ಟು ಸುಮ್ಮನಾಗಲು..

Date:

ಅದೇನೆ ಇರ‌್ಲಿ..! ಅಂತಾ ರವಿ ಬೆಳಗೆರೆಯವರ ಶೈಲಿಯಲ್ಲಿ ಹೇಳುವ ಕೇಸಂತೂ ಇದಲ್ಲ. ಅಲ್ಲೇನೋ ಇದೆ.ಇದ್ದೆ ಇದೆ. ಇಲ್ಲದೆ ಇದ್ದಿದ್ರೆ ಇದ್ಯಾವುದು ಆಗ್ತಿರಲಿಲ್ಲ. ಖಂಡಿತ ಅಲ್ಲೆನೋ ಇದೆ. ಹಾಗಾದ್ರೆ ಇದೆ ಅನ್ನುವುದು ಯಾವುದು ? ಏನೆನೋ ಇದೆ ಅಂತಾ ತೋರಿಸಿದ ಮಾಧ್ಯಮದವರ ಕೊರಳಪಟ್ಟಿ ಹಿಡಿದು ಕೇಳಿ, ಏನಿದೆ ಅಂತಾ ? ಅದು ಇದೆ, ಇದು ಇದೆ ಅಂತಾ ಅವರು ವಿತಂಡವಾದ ಮಾಡಬಹುದಷ್ಟೆ ಹೊರತು, ಇದ್ದದು ಇದೆ ಅಂತಾ ಸಾಬೀತುಕರಿಸಲು ಅವರ ಬಳಿಯೂ ಪೂರಕ ಸಾಕ್ಷ್ಯವಿಲ್ಲ.

ನಾನು ಈ ಹಿಂದೆ ಕೆಲಸ ಮಾಡ್ತಿದ್ದ ದೃಶ್ಯ ಮಾಧ್ಯಮದ ಮುಖ್ಯಸ್ಥರೊಬ್ಬರು ನಮಗೆಲ್ಲಾ ಒಂದು ಎಚ್ಚರಿಕೆ ನೀಡ್ತಾ ಇದ್ರು. ದೃಶ್ಯ ಮಾಧ್ಯಮದಲ್ಲಿ ಬರುವ ಸುದ್ದಿಗಳು premature baby ಇದ್ದ ಹಾಗೆ, ಒಂದು ರೀತಿ ಅರ್ಜೆಂಟಾಗಿ ಹುಟ್ಟಿದ ಕೂಸು‌. ಅದು ತಿಂಗಳು ತುಂಬುವ ಮೊದಲೆ ಹುಟ್ಟಿಬಿಡುತ್ತೆ. ಹುಟ್ಟಿದ ಮೇಲೆ ಅದರ ದೇಖಿರೇಖಿ ತುಂಬಾ ಕಷ್ಟ.ಹಾಗಾಗಿ ಸುದ್ದಿ ಕೊಡುವ ಮುಂಚೆ ಪತ್ರಕರ್ತ premature baby ಗಳನ್ನು ಹುಟ್ಟಿಸದಷ್ಟು maturity ಯನ್ನ ಬೆಳಸಿಕೊಳ್ಳಬೇಕು ಅನ್ನೋ ಪ್ರಜ್ಞೆಯ ಬಗ್ಗೆ ಒತ್ತಿ ಒತ್ತಿ ಹೇಳ್ತಿದ್ರು. ಆದ್ರೆ ಅವರು ಕೂಡ ಈ ಸನ್ನಿವೇಶದಲ್ಲಿ ದಂಡಿ ದಂಡಿಯಾಗಿ ಹುಟ್ಟುವ premature ಸುದ್ದಿ ಸಂತಾನದ ಜನಕ. ನನ್ನ ಪ್ರಕಾರ ಅವರ ಈ ನಡೆ, ಕಾಲದ ವಿಪರ‌್ಯಾಸ..ಅವರ ಪ್ರಕಾರ, ಕಾರ್ಪೊರೇಟ್ ಅಥವಾ ಮ್ಯಾನೇಜ್‌ಮೆಂಟ್ ಥಿಂಕಿಂಗ್..! ಇರಲಿ…!

ರವಿ ಬೆಳಗೆರೆ ತನ್ನ ಶಿಷ್ಯ ಸುನೀಲ್ ಹೆಗ್ಗರವಳ್ಳಿಯನ್ನು ಕೊಲ್ಲಿಸಲು ಸುಪಾರಿ ಕೊಟ್ಟಿದ್ದಾರೆ ಅನ್ನೋದು ಸದ್ಯದ ವಿಷಯ.ಗೌರಿ ಲಂಕೇಶ್ ಕೇಸ್ ಹುಡುಕಿಕೊಂಡು ಹೊರಟ SIT ತಂಡಕ್ಕೆ ಈ ಕೇಸ್ ಅಚಾನಕ್ಕಾಗಿ ಸಿಕ್ಕಿಬಿಡ್ತು.ಯಾವಾಗ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಹೊರಗೆ ಬಂತೋ ಎಲ್ಲ ವಾಹಿನಿಗಳು doctrine of probabilities ಅಥವಾ ಕನ್ನಡದಲ್ಲಿ ಹೇಳುವುದಾದ್ರೆ, ಸಂಭವನೀಯ ಸಿದ್ದಾಂತ ಮಂಡಿಸಲು ಶುರು ಮಾಡಿದ್ವು. ಕೆಲ ವಾಹಿನಿಯಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಪುರಾತನ ದ್ವೇಷದ ಪ್ರಸವ ವೇದನೆ ಕಾಡಲು ಶುರುವಾಯ್ತು. ಅವರ ನರಮಂಡಲದಲ್ಲಿ, ಬಿದ್ದವನನ್ನು ಹುಕ್ಕಿಮುರಿಯುವ ಕ್ರಿಯೇಟಿವಿಟಿ ಜಾಗೃತವಾಗತೊಡಗಿತು‌. ‘ ಖ್ಯಾತ ಪತ್ರಕರ್ತ’ ಅನ್ನುವ ಟೈಟಲ್ ‘ಕ್ಯಾತೆ ಪತ್ರಕರ್ತ ‘ ಆಯ್ತು. ‘ರವಿಬೆಳಗೆರೆಯ ಕಾಮರಾಜಮಾರ್ಗ’, ಪಾಪಿಗಳ ಲೋಕದಲ್ಲಿ ರವಿ ಬೆಳಗೆರೆ, ಸರ್ಪಸಂಬಂಧ ಎಂಬ ಅವರದೆ ಪುಸ್ತಕಗಳ ಹೆಡ್ಡರ್ ಕೊಟ್ಟು ನ್ಯೂಸ್ ಡೆಸ್ಕ್‌ನಲ್ಲಿ ಸಂಭ್ರಮಿಸಿಬಿಟ್ರು‌‌. ಕೊನೆಗೆ ಬೆಳಗೆರೆ ಸುಪಾರಿ ಕೊಟ್ಟಿದ್ದು, ಶಿಷ್ಯ ಹೆಗ್ಗರವಳ್ಳಿ ತನ್ನ ಎರಡನೆ ಹೆಂಡತಿ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಂತಾ ಷರಾ ಬರೆದು ಬಿಟ್ರು.

ಇಲ್ಲಿಗೆ,ಮಾಧ್ಯಮದ ಪ್ರಕಾರವೆ ಒಂದು ವಿಷ್ಯ ಕನ್‌ಫರ್ಮ್. ಅಂದರೆ ಬೆಳಗೆರೆ ಸುಪಾರಿ ಕೊಟಿದ್ದು ತನ್ನ ಎರಡನೆ ಹೆಂಡತಿ ಜೊತೆ ಸುನೀಲ್ ಹೆಗ್ಗರವಳ್ಳಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಕಾರಣಕ್ಕೆ.

ಒಂದು ವೇಳೆ ಮಾಧ್ಯಮಗಳೆ ಹೇಳುವ ಪ್ರಕಾರ, ರವಿ ಬೆಳಗೆರೆ,ತನ್ನ ಎರಡನೆ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಸುನೀಲ್ ಹೆಗ್ಗರವಳ್ಳಿಯನ್ನು ( ಅನೈತಿಕ ಸಂಬಂಧ ನಿಜವಾಗಿದ್ರೆ)ಏನು ಮಾಡಬೇಕು ? ಒಬ್ಬ ಗಂಡನಾಗಿ ರವಿ ಬೆಳಗೆರೆ ಏನು ಮಾಡಬಹುದಿತ್ತು ? ತನ್ನ ಹೆಂಡತಿ ಜೊತೆ ಸಂಬಂಧವಿಟ್ಟುಕೊಂಡವನಿಗೆ ‘ಸಂತಾನವೀರ’ ಅಥವಾ ‘ ವೀರ್ಯದಾನ ಶೂರ’ ಪ್ರಶಸ್ತಿ ಕೊಡಲಿ ಎಂದು ಶಿಫಾರಸ್ಸು ಮಾಡಬೇಕಿತ್ತೆ ? ಅಥವಾ ಹಮ್ ದಿಲ್ ದೆ ಚುಕೆ ಸನಮ್ ಚಿತ್ರದ ದೇವಗನ್ ಥರ ಹೆಂಡತಿಯನ್ನು ಪ್ರಿಯಕರನ ಸುಪರ್ದಿಗೆ ಕೊಡಬೇಕಿತ್ತೆ ?

ರವಿ ಬೆಳಗೆರೆ ಮಾಡಿದ್ದು ತಪ್ಪು ಅಂತಾ ಬೊಂಬ್ಡಾ ಹೊಡೆಯುವವರು, ಬೆಳಗೆರೆ ಶೂ ನಲ್ಲಿ ನಿಂತುಕೊಂಡು ಕೊಂಚ ಯೋಚನೆ ಮಾಡುವ ಮನಸ್ಸು ಮಾಡಿದ್ರೆ ಸತ್ಯ ಬೇರೆಯೆ ಆಗ್ತಿತ್ತು. ಅವರ ವೈಯಕ್ತಿಕ ಬದುಕಿನಲ್ಲೆ ಈ ರೀತಿ ಆಗಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ರು ಅನ್ನೋ ಪ್ರಶ್ನೆಗೆ ಅವರ ಬಳಿಯೂ ಉತ್ತರವಿಲ್ಲ. ಯಾವ ಗಂಡನೂ ಷಂಡನೆನಿಸಿಕೊಂಡು ಬದುಕುವುದಿಲ್ಲ. ಒಂದು ಹೆಣ್ಣು ಹೇಗೆ ತನ್ನ ಗಂಡನನ್ನು ಇನ್ನೊಬ್ಬ ಹೆಣ್ಣಿನೊಂದಿಗೆ ಶೇರ್ ಮಾಡಲು ಬಯಸವುದಿಲ್ಲವೋ‌., ಅದೆ ರೀತಿ ಒಂದು ಗಂಡು ಕೂಡ ತನ್ನ ಹೆಂಡತಿಯನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡಲಾರ ಜೊತೆಗೆ ಸಹಿಸಲಾರ. ರವಿ ಬೆಳಗೆರೆ ಕೇಸ್‌ನಲ್ಲಿ ನಿಜವಾಗಿ ಆ ರೀತಿ ನಡೆದಿದ್ರೆ, ಬೆಳಗೆರೆ ತೆಗೆದುಕೊಂಡ ಸ್ಟೆಪ್, ಅನೈತಿಕ ಸಂಬಂಧ ಇಟ್ಟುಕೊಂಡ ಹೆಗ್ಗರವಳ್ಳಿಯಷ್ಟು ಅನೈತಿಕವಲ್ಲ.ಇದು human tendency ಅಷ್ಟೆ. ಗಂಡ-ಹೆಂಡತಿ ಸಂಬಂಧ ಯಾವತ್ತೂ ಕೊಂಚ ಇಂಟೆನ್ಸ್ ಪೊಸೆಸ್ಸಿವ್. ಈ ಸಂಬಂಧದ ಮಧ್ಯೆ ಯಾರಿಗೂ ಪ್ರವೇಶವಿಲ್ಲ. Including ಪರಮಾಪ್ತ ಶಿಷ್ಯನಿಗೂ ಕೂಡ.

ರವಿ ಬೆಳಗೆರೆಯೆ ಬರೆದುಕೊಂಡಂತೆ ಇದು ‘ ನಂಬಿಕೆ ದ್ರೋಹ’ ಅಥವಾ ‘ಮೋಸ’ದ ಪ್ರಶ್ನೆ. ತಪ್ಪು ಮಾಡಿದವನನ್ನು ಕ್ಷಮಿಸಬಹುದು. ಯಾಕಂದ್ರೆ ಅದು ಉದ್ದೇಶವಿಲ್ಲದೆ,ಅರಿವಿಲ್ಲದೆ ಘಟಿಸಬಹುದಾದ್ದದು. ಆದರೆ ಮೋಸ, ತಪ್ಪೆಂಬ ಅರಿವಿದ್ದೂ, ಉದ್ದೇಶಪೂರ್ವಕವಾಗಿ ಮಾಡುವಂತದ್ದು. ಈ ಮೋಸಕ್ಕೆ ರವಿ ಬೆಳಗೆರೆ ರಿಯಾಕ್ಷನ್ ಕೊಂಚ ಅತಿಯಾಗಿರಬಹುದಷ್ಟೆ…!

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ರವಿ ಬೆಳಗೆರೆ ಶ್ರೀರಾಮಚಂದ್ರನೂ ಅಲ್ಲ..,ಇಂದ್ರನ ಜೊತೆ ಮಲಗಿದ ಪತ್ನಿ ಅಹಲ್ಯೆಗೆ ಶಿಲೆಯಾಗು ಅಂತಾ ಶಾಪ ಕೊಟ್ಟ ಗೌತಮ ಮುನಿಯೂ ಅಲ್ಲ…! He is also ordinary human being

-ಭವಿತ್ ದೋಣಗುಡಿಗೆ

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...