ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವಕ್ಕೆ ಪ್ರವಾಸಿ ಶ್ರೀಲಂಕಾ ತಲೆಬಾಗಿದೆ.ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡ ಭಾರತ 141 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದರು.
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಏಕದಿನ ಕ್ರಿಕೆಟ್ ನಲ್ಲಿ 3ನೇ ವೈಯಕ್ತಿಕ ದ್ವಿಶತಕದ ದಾಖಲೆ ಬರೆದರು. ರೋಹಿತ್ ಅಜೇಯ 208ರನ್‍ಗಳನ್ನು ಚಚ್ಚಿದರು. 153 ಎಸೆತಗಳನ್ನು ಎದುರಿಸಿದ ರೋಹಿತ್ ಅವರ ಅಮೋಘ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 12 ಭರ್ಜರಿ ಸಿಕ್ಸರ್ ಗಳಿದ್ದವು.
ಟಾಸ್ ಗೆದ್ದ ಶ್ರೀಲಂಕಾ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ನಾಯಕ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ 68 ರನ್‍ಗಳ ಕೊಡುಗೆ ನೀಡಿದರು. ಧವನ್ ನಂತರ ಬಂದ ಶ್ರೇಯಸ್ ಅಯ್ಯರ್ 88 ರನ್ ಗಳನ್ನು ಬಾರಿಸಿದರು. ಮಾಜಿ ನಾಯಕ ಧೋನಿ 1 ಸಿಕ್ಸರ್ ಸಹಿತ 7 ರನ್ ಹಾಗೂ ಹಾರ್ದಿಕ್ ಪಾಂಡ್ಯ 8 ರನ್ ಕೊಡುಗೆ ನೀಡಿದ್ದಾರೆ.
ನಿಗಧಿತ 50 ಓವರ್ ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು ಪ್ರವಾಸಿ ಶ್ರೀಲಂಕಾ ತಂಡಕ್ಕೆ 393ರನ್ ಗಳ ದೊಡ್ಡ ಗುರಿಯನ್ನು ನೀಡಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 251 ರನ್ ಗಳಿಸಲು ಶಕ್ತವಾಗಿ ಸೋಲಪ್ಪಿಕೊಂಡಿತು. ಶ್ರೀಲಂಕಾ ಪರ ಏಂಜೆಲೋ ಮ್ಯಾಥ್ಯೂಸ್ ಏಕಾಂಗಿ ಹೋರಾಟ (111)ನಡೆಸಿದರು. ಭಾರತದ ಪರ ಭುವನೇಶ್ವರ ಕುಮಾರ್, ಹಾರ್ದಿಕ್ ಪಾಂಡ್ಯ, ವಾಶಿಂಗ್ ಟನ್ ಸುಂದರ್ ತಲಾ 1 ವಿಕೆಟ್, ಚಹಾಲ್ 3 ಹಾಗೂ ಬೂಮ್ರಾ 2 ವಿಕೆಟ್ ಪಡೆದರು.
ರೋಹಿತ್ ಶರ್ಮಾ 2013ರ ನವೆಂಬರ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 209ರನ್ ಹಾಗೂ 2014ರ ನವೆಂಬರ್ 13ರಂದು ಕೋಲ್ಕತ್ತದ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧ 264ರನ್ ಗಳನ್ನು ಮಾಡಿದ್ದರು. ಇಂದಿನ ದ್ವಿಶತಕ ಶ್ರೀಲಂಕಾದ ವಿರುದ್ಧದ ಎರಡನೇ ಹಾಗೂ ಏಕದಿನ ಕ್ರಿಕೆಟ್ ನ ಮೂರನೇ ದ್ವಿಶತಕ. ಏಕದಿನ ಕ್ರಿಕೆಟ್ ನಲ್ಲಿ ಅತಿಹೆಚ್ಚು ದ್ವಿಶತಕ ಸಿಡಿಸಿದ ಕೀರ್ತಿಗೆ ಹಿಟ್ ಮ್ಯಾನ್ ಖ್ಯಾತಿಯ ಶರ್ಮಾ ಭಾಜನರಾಗಿದ್ದಾರೆ. ನಾಯಕನಾಗಿ ಇನ್ನಿಂಗ್ಸ್ ಒಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ರೋಹಿತ್ ಮಾಡಿದ್ದಾರೆ.