ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಅಲ್ಲಾನನ್ನು ಜಪಿಸಿದ ಮುಸ್ಲಿಂ ಮಹಿಳೆಗೆ ಕೃಷ್ಣ ಎಂದು ಜಪಿಸುವಂತೆ ಒತ್ತಡ ಹೇರಿ ಆಪರೇಷನ್ ಮಾಡಿದ್ದಾರೆ ಎಂಬ ಆರೋಪ ವೈದ್ಯರೊಬ್ಬರ ವಿರುದ್ಧ ಕೇಳಿಬಂದಿದೆ.
ಬೆಂಗಳೂರು ಮೂಲದ ನಾಸೀಮಾ ಬಾನು ಚಿಕ್ಕಬಳ್ಳಾಪುರದ ಅಜ್ಜಿ ಮನೆಗೆ ಹೋಗಿದ್ದರು. ಈ ವೇಳೆ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ನೀಡಲು ಬೆಂಗಳೂರಿಂದ ಬಂದಿದ್ದ ಡಾ. ರಾಮಕೃಷ್ಣಪ್ಪ ಕೃಷ್ಣ ಮಂತ್ರ ಜಪಿಸುವಂತೆ ಒತ್ತಾಯ ಮಾಡಿದ್ದಾರೆ. ಆಪರೇಷನ್ ಮಾಡುವಾಗ ಅಲ್ಲಾ ಅಲ್ಲಾ ಎಂದು ಹೇಳುತ್ತಿದ್ದ ನಸೀಮಾ ಬಾನು ಅವರಿಗೆ ಅಲ್ಲಾ ಅನ್ನಬೇಡ ಕೃಷ್ಣ ಎನ್ನು ಎಂದು ತಾಕೀತು ಮಾಡಿದ್ದಾರೆ ವೈದ್ಯ ರಾಮಕೃಷ್ಣಪ್ಪ. ಬಾನು ಅವರು ನಿರಾಕರಿಸಿದಾಗ ಆಪರೇಷನ್ ಮಾಡಲ್ಲ ಅಂದಿದ್ದಾರೆ. ಆಗ ಒತ್ತಡಕ್ಕೆ ಮಣಿದು ತಾನು ಕೃಷ್ಣನ ಹೆಸರು ಪಠಿಸಿದ್ದೇನೆ ಎಂದು ಆರೋಪಿಸಿರುವ ಮಹಿಳೆ ತಮ್ಮ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.