ಹತ್ತೇ ಹತ್ತು ನಿಮಿಷ ತಡವಾಗಿದ್ದರೆ ಹುಟ್ಟು ಹಬ್ಬದಂದೇ ಆ ಯುವಕನ ಪ್ರಾಣಪಕ್ಷಿ ಹಾರಿ ಹೋಗಿರುತ್ತಿತ್ತು. ಆದ್ರೆ, ಆತನ ತಂದೆ-ತಾಯಿ ಮಾಡಿದ ಪುಣ್ಯವಿರಬೇಕು ಆತ ಬದುಕಿಳಿದ. ಈತನ ಜೀವ ಉಳಿಸಿದ್ದು ನಾಲ್ವರು ಪತ್ರಕರ್ತರು.
ನಿನ್ನೆ (ಶುಕ್ರವಾರ) ತಡರಾತ್ರಿ ಸುಮಾರು 12 ಗಂಟೆಗೆ ನಡೆದ ಘಟನೆಯಿದು. ಆತ ಗೌರಿಬಿದನೂರಿನ ಯುವಕ ಭರತ್ ರೆಡ್ಡಿ (25). ತುಮಕೂರಿನ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿ. ನಗರದ ನಕ್ಷತ್ರ ಬಾರ್ ನಲ್ಲಿ ರಾತ್ರಿ ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬದ ಪಾರ್ಟಿಯನ್ನು ಮುಗಿಸಿಕೊಂಡು ರೂಂಗೆ ಹೋಗುತ್ತಿದ್ದ. ಭದ್ರಮ್ಮ ವೃತ್ತದಿಂದ ಟೌನ್‍ಹಾಲ್ ವೃತ್ತದ ಕಡೆಗೆ ಹೋಗುತ್ತಿರುವಾಗ ಮಾರ್ಗಮಧ್ಯೆ ಆಯತಪ್ಪಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸಾವು ಬದುಕಿನ ನಡುವೆ ಹೋರಾಡುತ್ತಾ ಅರೆಪ್ರಜ್ಞಾವಸ್ಥೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ.
ಕೆಲಸ ಮುಗಿಸಿ, ಜಿಲ್ಲಾಸ್ಪತ್ರೆ ಬಳಿಯ ಹೋಟೆಲ್ ಒಂದರಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಅಮೋಘ ಚಾನಲ್‍ನ ವರದಿಗಾರ ಈಶ್ವರ್, ವೀಡಿಯೋ ಜರ್ನಲಿಸ್ಟ್ ಹರೀಶ್, ಬಿ.ಟಿವಿಯ ವೀಡಿಯೋ ಜರ್ನಲಿಸ್ಟ್ ಸತೀಶ್, ಟಿವಿ9 ವೀಡಿಯೋ ಜರ್ನಲಿಸ್ಟ್ ದಯಾನಂದ ಹಾಗೂ ದಿಗ್ವಿಜಯ ವಾಹಿನಿಯ ವೀಡಿಯೋ ಜರ್ನಲಿಸ್ಟ್ ಸುದರ್ಶನ್ ತಮ್ಮ ಮನೆ/ ರೂಂಗೆ ಹೊರಟಿದ್ದರು. (ಶಿವಕುಮಾರ ಸ್ವಾಮೀಜಿ ವೃತ್ತ/ ತುಮಕೂರು ವಿವಿ ಕಡೆಗೆ). ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ನೋಡಿ ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಹೇಳುವಂತೆ ಹತ್ತೇ ಹತ್ತು ನಿಮಿಷ ತಡವಾಗಿದ್ದರೆ ಭರತ್ ರೆಡ್ಡಿ ಸಾವನ್ನಪ್ಪುತ್ತಿದ್ದ. ಈಗ ಆತನ ಪೋಷಕರಿಗೆ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.